ಬೆಂಗಳೂರು: ಕಳೆದ ಎರಡು - ಮೂರು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್ ಆಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಅಧಿಕೃತ ವೇಳಾಪಟ್ಟಿ ಹಾಗೂ ಅಧಿಸೂಚನೆಯನ್ನು ಇಂದು ಪ್ರಕಟಿಸಿದೆ. ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಕಾಯ್ದೆ ಅಧಿಸೂಚಿಸಿದ ಸಂದರ್ಭದಲ್ಲಿ ಕೆಲವು ಶಿಕ್ಷಕರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು.
ಅದಕ್ಕಾಗಿ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದೆವು. ಸಚಿವ ಸಂಪುಟದ ಅನುಮೋದನೆಯನ್ನು ಪಡೆದು ರಾಜ್ಯಪಾಲರು ಒಪ್ಪಿದ ಬಳಿಕ ಸುಗ್ರೀವಾಜ್ಞೆಯನ್ನು ಹೊರತರಲಾಗಿದೆ.
ಯಾವಾಗ ಕೌನ್ಸೆಲಿಂಗ್ ಪ್ರಕ್ರಿಯೆ:
ಹೆಚ್ಚುವರಿ ಮತ್ತು ಕಡ್ಡಾಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಮುಂದಿನ ತಿಂಗಳ ಜುಲೈ 12 ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 21 ರಂದು ವರ್ಗಾವಣಾ ಪ್ರಕ್ರಿಯೆಗೆ ಕೌನ್ಸೆಲಿಂಗ್ ನಡೆಸಲಾಗುತ್ತೆ. ಕಳೆದ ಸಾಲಿನ ವರ್ಗಾವಣೆಗಾಗಿ ಸ್ವೀಕಾರ ಮಾಡಿರುವ ಅರ್ಜಿಗಳಿಗೆ ಸಂಬಂಧಪಟ್ಟಂತೆ ಪ್ರಕ್ರಿಯೆ ಜುಲೈ 26 ರಿಂದ ಆರಂಭವಾಗಲಿದ್ದು, 2022ರ ಜನವರಿ 14 ರಂದು ಕೌನ್ಸಿಂಗ್ ನಡೆಸಲಾಗುತ್ತದೆ. ಪ್ರಸಕ್ತ ಸಾಲಿನ ವರ್ಗಾವಣೆಗೆ ಸ್ವೀಕರಿಸುವ ಅರ್ಜಿಗಳ ಪ್ರಕ್ರಿಯೆಗೆ ಜುಲೈ 27 ರಿಂದ ಆರಂಭವಾಗಲಿದ್ದು, 2022 ರ ಫೆಬ್ರವರಿ 26 ರಂದು ಕೌನ್ಸೆಲಿಂಗ್ ನಡೆಸಲಾಗುತ್ತದೆ..
ವರ್ಗಾವಣಾ ಅರ್ಜಿಗಳನ್ನು ಸಲ್ಲಿಸುವ ಕ್ರಮ ಮತ್ತು ಅರ್ಹತೆ ಹೀಗಿದೆ:
ಕೋರಿಕೆ ವರ್ಗಾವಣೆ:
ಈ ಹಿಂದೆ 2020ರ ಡಿಸೆಂಬರ್ ಮತ್ತು ಪೂರಕ ಅಧಿಸೂಚನೆಗಳನುಸಾರ ಸ್ವೀಕೃತವಾಗಿರುವ ಅರ್ಜಿಗಳನ್ನು ನಿಯಮಾನುಸಾರ ಒಂದನೇ ಹಂತದ ಕೌನ್ಸೆಲಿಂಗ್‌ಗೆ ಪರಿಗಣಿಸಲಾಗುತ್ತದೆ. ಅದು ಅರ್ಜಿ ಸಲ್ಲಿಸಿರುವ ಶಿಕ್ಷಕರು ಇಚ್ಛೆ ಪಟ್ಟಲ್ಲಿ ಅರ್ಜಿ ಹಿಂಪಡೆಯಲು ಅವಕಾಶ ನೀಡಲಾಗಿದೆ. ಹೀಗೆ ಹಿಂಪಡೆದ ನಂತರ ಉಳಿಯುವ ಬಾಕಿ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹ ಇರುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
2ನೇ ಹಂತದ ಕೌನ್ಸೆಲಿಂಗ್‌ಗಾಗಿ ಅರ್ಜಿ ಸಲ್ಲಿಸುವ ವಿಧಾನ:
1ನೇ ಸುತ್ತಿನ ವರ್ಗಾವಣೆ ಕೌನ್ಸೆಲಿಂಗ್ ಪೂರ್ಣಗೊಂಡ ನಂತರದಲ್ಲಿನ ಖಾಲಿ ಹುದ್ದೆಗಳಿಗೆ ಎರಡನೇಯ ಸುತ್ತಿನಲ್ಲಿ ಹಮ್ಮಿಕೊಳ್ಳುವ ಪ್ರತ್ಯೇಕ ಕೌನ್ಸೆಲಿಂಗ್ ಪ್ರಕ್ರಿಯೆಗಳಿಗೆ ಅರ್ಜಿಯನ್ನು ಸಲ್ಲಿಸ ಬಯಸುವವರು ನಿಯಮಿತ ವಿಧಾನದಲ್ಲಿ ಅರ್ಜಿಗಳನ್ನು ಸಲ್ಲಿಸಿಕೊಳ್ಳಬಹುದಾಗಿದೆ.
ಹಾಗೇ, ಕಳೆದ ವರ್ಷದ ಅಧಿಸೂಚನೆಗನುಸಾರ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆದರೆ, ಅರ್ಜಿ ಸಲ್ಲಿಸಿದವರು ಸ್ವ ಇಚ್ಛೆಯಿಂದ ಅರ್ಜಿ ಹಿಂಪಡೆಯಲು ಅವಕಾಶವಿದೆ. ಹೀಗೆ ಅರ್ಜಿ ಹಿಂಪಡೆದವರು 2ನೇ ಹಂತದ ಕೌನ್ಸಲಿಂಗ್‌ಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
ಆದರೆ, 1ನೇ ಹಂತದ ಕೌನ್ಸಿಲಿಂಗ್ ಗೆ ಅವಕಾಶವಿರುವುದಿಲ್ಲ. ಜೊತೆಗೆ ಅರ್ಜಿ ಸಲ್ಲಿಸಿರುವವರ ಅರ್ಜಿಯು ಪರಿಶೀಲನೆ ಸಂದರ್ಭದಲ್ಲಿ ತಿರಸ್ಕರಿಸಲ್ಪಟ್ಟಲ್ಲಿ 2ನೇ ಹಂತದ ಕೌನ್ಸೆಲಿಂಗ್‌ಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಆದರೆ 1ನೇ ಹಂತದ ಕೌನ್ಸಿಲಿಂಗ್ ಗೆ ಅವಕಾಶವಿರುವುದಿಲ್ಲ.
- ಶಿಕ್ಷಕರು ಕೋರಿಕೆ ಮೇಲೆ ಹೊಸದಾಗಿ ವರ್ಗಾವಣೆಗೆ ಅರ್ಜಿ ಸಲ್ಲಿಸುವುದಾದಲ್ಲಿ ನಿಗದಿಪಡಿಸಿರುವ ಕೊನೆಯ ದಿನಾಂಕದ ಒಳಗೆ Onlineನಲ್ಲಿ ಇಲಾಖಾ ತಂತ್ರಾಂಶದ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು ಮತ್ತು ನಿಗದಿಪಡಿಸಿದ ದಿನಾಂಕದ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆದ್ಯತೆ ಪ್ರಕರಣದ ಪರಿಶೀಲನೆಗೆ ಮೂಲ ದಾಖಲೆಗಳೊಂದಿಗೆ ಹಾಜರಾಗಿ ಸ್ವೀಕೃತಿ ಪಡೆಯತಕ್ಕದ್ದು.
- ಖಾಯಂ ಪೂರ್ವ ಸೇವಾ ಅವಧಿ ತೃಪ್ತಿಕರವೆಂಬುದಾಗಿ ಘೋಷಣೆ ಯಾಗಿರಬೇಕು. ಜಿಲ್ಲೆಯೊಳಗಿನ ಅಥವಾ ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕಕ್ಕೆ ವರ್ಗಾವಣೆ ಬಯಸುವ ಶಿಕ್ಷಕರು ಅರ್ಜಿ ಸಲ್ಲಿಸಲು ವರ್ಗಾವಣೆ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರಬೇಕು.
- ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020 [ಕರ್ನಾಟಕ ಅಧಿನಿಯಮ ಸಂಖ್ಯೆ-4ರ ಪ್ರಕರಣ 2(ಡಿ) ಪ್ರಕಾರ ಕನಿಷ್ಠ ಸೇವಾವಧಿ ಎಂದರೆ ಮರುನಿಯೋಜನೆ ಹೊಂದಿರುವ ಶಾಲೆಯಲ್ಲಿ ಸಲ್ಲಿಸಿದ ಸೇವೆಯೂ ಒಳಗೊಂಡಂತೆ ಮೂರು ವರ್ಷಗಳ ನಿರಂತರ ಸೇವೆ ಎಂದು ಸ್ಪಷ್ಟಪಡಿಸಿರುವುದನ್ನು ತಪ್ಪದೇ ಪಾಲಿಸುವುದು.