ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ್ ಬೆಂಗಳೂರು:ಯಾವ ಯಾವ ಮುಖ್ಯಮಂತ್ರಿಗಳ ಕಾಲದಲ್ಲಿ ಎಷ್ಟೆಷ್ಟು ಸಾಲ ಮಾಡಲಾಗಿದೆ ಎಂದು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಚಿತ್ರದುರ್ಗದ ಶಿಕ್ಷಕ ಶಾಂತಮೂರ್ತಿ ಎನ್ನುವವರನ್ನು ಅಮಾನತು ಮಾಡಿಸಿ ಡಿಸಿಎಂ ಡಿ ಕೆ ಶಿವಕುಮಾರ್ ಸರ್ವಾಧಿಕಾರಿ ವರ್ತನೆ ತಳೆದಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ಹೊಸದುರ್ಗದ ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕ ಶಾಂತಮೂರ್ತಿ ಫೇಸ್ಬುಕ್ ಖಾತೆಯಲ್ಲಿ ಯಾವ ಯಾವ ಮುಖ್ಯಮಂತ್ರಿ ಅವರವರ ಕಾಲದಲ್ಲಿ ಎಷ್ಟೆಷ್ಟು ಸಾಲ ಮಾಡಿದ್ದರು ಎಂದು ಹಾಕಿಕೊಂಡಿದ್ದರು. ಜೆ.ಹೆಚ್. ಪಟೇಲ್ ಕಾಲದಿಂದ ಇಲ್ಲಿಯವರೆಗೆ ಎಷ್ಟು ಸಾಲ ಮಾಡಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದರು. ಅದಕ್ಕೆ ಶಿಕ್ಷಕ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಅಮಾನತು ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಯಾರು ಸಹ ಸರ್ಕಾರವನ್ನು ಟೀಕೆ ಮಾಡುವ ಹಾಗಿಲ್ಲ, ವಾಕ್ ಸ್ವಾಂತಂತ್ರ್ಯ ಇಲ್ಲ ಎಂಬುದಕ್ಕೆ ಇಂದೊಂದು ನಿದರ್ಶನ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಸಹ ಇದೇ ರೀತಿ ದೌಜರ್ನ್ಯ, ದಬ್ಬಾಳಿಕೆ ಮಾಡುತ್ತಿದ್ದರು. ಇವರು ಅದೇ ರೀತಿ ವರ್ತನೆ ಮಾಡುತ್ತಿದ್ದಾರೆ, ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಗ್ಯಾರಂಟಿಗಳಿಗೆ ಸಚಿವ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ಕೊಡಲಾಗಿದೆ ಎನ್ನುತ್ತಿದ್ದಾರೆ. ಆದರೆ ತಿಂಗಳ ಸಮಯ ಬೇಕಾದರೆ ಪಡೆಯಬೇಕಿತ್ತು, ಯಾಕೆ ರಾಹುಲ್ ಬಾಯಲ್ಲಿ ಮೊದಲ ಸಂಪುಟದಲ್ಲೇ ಜಾರಿ ಮಾಡುವುದಾಗಿ ಹೇಳಿಸಿದ್ದಿರಿ ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಅಶ್ವಥನಾರಾಯಣ್ ಪ್ರಶ್ನಿಸಿದರು. ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದ್ದೀರಿ. ಇದಕ್ಕೆ ಸ್ಪಷ್ಟೀಕರಣ ನೀಡಿ, ಕೇಂದ್ರ ಸರ್ಕಾರ 5 ಕೆಜಿ ರಾಜ್ಯ ಸರ್ಕಾರ 1 ಕೆಜಿ ಸೇರಿ ಸದ್ಯ 6 ಕೆಜಿ ಪಡಿತರ ವ್ಯವಸ್ಥೆ ಅಡಿಯಲ್ಲಿ ಕೊಡುತ್ತಿದ್ದಾರೆ, ಈಗ ನೀವು 10 ಕೆಜಿ ಅಕ್ಕಿ ಕೊಟ್ಟರೆ, ಅದು ಕೇಂದ್ರದ 5 ಕೆಜಿ ಸೇರಿಯಾ ಅಥವಾ ಬಿಟ್ಟಾ ಎನ್ನುವುದನ್ನು ಹೇಳಿ ಎಂದು ಪ್ರಶ್ನಿಸಿದರು.
ಈ ಬಾರಿ ಮಾವು ಫಸಲು ಕಡಿಮೆಯಾಗಿದೆ, ಇಳುವರಿ ಕಡಿಮೆಯಾಗಿದೆ. ಜೊತೆಗೆ ಆಲಿಕಲ್ಲು ಮಳೆಗೆ ಮಾವು ಹಾಳಾಗಿದ್ದು, ಜನರಿಗೆ ತುಂಬಾ ನಷ್ಟವಾಗಿದೆ. ಹಾಗಾಗಿ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಬೆಳೆ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ್ ಆಗ್ರಹಿಸಿದರು.
ಐದು ಗ್ಯಾರಂಟಿಗಳ ಜಾರಿಗೆ ತಾತ್ವಿಕ ಅನುಮೋದನೆ: ಸಿಎಂ ಸಿದ್ದರಾಮಯ್ಯನೇತೃತ್ವದ ನೂತನ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ನೀಡಿದ್ದ ಎಲ್ಲಾ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿದೆ.
ಇದನ್ನೂ ಓದಿ:'ವಂದೇ ಮಾತರಂ' ಗೀತೆಯೊಂದಿಗೆ 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭ