ಬೆಂಗಳೂರು: ನಮ್ಮ ಮೆಟ್ರೋ ಮುಂದಿನ ದಿನಗಳಲ್ಲಿ ಬೆಂಗಳೂರಿನ ಲೈಫ್ ಲೈನ್ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಸುರಂಗ ಕೊರೆಯುವ ಯಂತ್ರ ಊರ್ಜಾವು ಶಿವಾಜಿನಗರ ಮೆಟ್ರೋ ನಿಲ್ದಾಣದಿಂದ ಹೊರಬರುವುದನ್ನ ವೀಕ್ಷಿಸಿದ ಬಳಿಕ ಅವರು ಮಾತಾನಾಡಿದರು. ಈ ಮೆಟ್ರೋ ಮುಂದಿನ ದಿನಗಳಲ್ಲಿ ಬೆಂಗಳೂರಿನ ಲೈಫ್ ಲೈನ್ ಆಗಲಿದೆ. ಇದುವರೆಗೆ ಕಂಟೋನ್ಮೆಂಟ್ನಿಂದ 855 ಮೀಟರ್ ಸುರಂಗ ಕೊರೆಯಲಾಗಿದೆ. ಮೆಟ್ರೋ 2ನೇ ಹಂತದ ಕಾಮಗಾರಿಯನ್ನು 2024ಕ್ಕೆ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ, ಹೆಚ್ಚು ಜನರನ್ನು ಕೆಲಸಕ್ಕೆ ಬಳಸಿಕೊಂಡು ಬೇಗ ಕಾಮಗಾರಿ ಕೆಲಸ ಮುಗಿಸಿ. ಮೆಟ್ರೋ ಕಾಮಗಾರಿಗೆ ಜನ ಸಹಕಾರ ನೀಡುತ್ತಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣದವರೆಗೆ ಮೆಟ್ರೋ ರೈಲು ನಿರ್ಮಿಸಲಾಗುವುದು ಎಂದರು.
ಹಂತ-2ರ ಕಾಳೇನಾ ಅಗ್ರಹಾರ ಮತ್ತು ನಾಗವಾರ ನಡುವಿನ ಮಾರ್ಗವು 21.26 ಕಿ.ಮೀ ಉದ್ದವಿದೆ. ಈ ಮಾರ್ಗ 7.5 ಕಿ.ಮೀ ಎತ್ತರಿಸಿದ ಮಾರ್ಗವಾಗಿದ್ದು ಹಾಗೂ 6 ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಉಳಿದ 13.76 ಕಿ.ಮೀ ಸುರಂಗ ಮಾರ್ಗವಾಗಿದ್ದು, 12 ನಿಲ್ದಾಣಗಳನ್ನು ಒಳಗೊಂಡಿರಲಿದೆ.
2020ರ ಜುಲೈನಲ್ಲಿ ಕಂಟೋನ್ಮೆಂಟ್ ನಿಲ್ದಾಣದಿಂದ ಶಿವಾಜಿನಗರ ಮಟ್ರೋ ನಿಲ್ದಾಣದವರೆಗೆ ಮೊದಲನೇ ಸುರಂಗ ಕೊರೆಯುವ ಯಂತ್ರಕ್ಕೆ (ಊರ್ಜಾ) ಚಾಲನೆ ನೀಡಿದ್ದರು. ಈ ಯಂತ್ರವು 855 ಮೀಟರ್ ಸುರಂಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಶಿವಾಜಿನಗರ ಮಟ್ರೋ ನಿಲ್ದಾಣದಲ್ಲಿ ಇಂದು ಹೊರಬಂದಿದೆ.
ಸುರಂಗ ಮಾರ್ಗದ ಒಟ್ಟು ಉದ್ದ 21.246 ಕಿ.ಮೀ (ಜೋಡಿ ಸುರಂಗ ಮಾರ್ಗ), 9 ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ನಿಯೋಜಿಸಲಾಗಿದೆ. ಇಲ್ಲಿಯವರೆಗೆ 3.842 ಕಿ.ಮೀ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ.