ಬೆಂಗಳೂರು:ದೇಶದಲ್ಲಿ ತೆರಿಗೆ ಭಯೋತ್ಪಾದಕ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ವ್ಯವಸ್ಥಿತವಾದ ಷಡ್ಯಂತ್ರ ಮಾಡುತ್ತಿದೆ ಎಂದು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆರೋಪಿಸಿದ್ದಾರೆ.
ದೇಶದಲ್ಲಿ ತೆರಿಗೆ ಭಯೋತ್ಪಾದನೆ ನಡೆಯುತ್ತಿದೆ.. ಎಂಎಲ್ಸಿ ಪ್ರಕಾಶ್ ರಾಥೋಡ್ ಆರೋಪ - ಐಟಿ ದಾಳಿ ಕಿರುಕುಳದಿಂ ಸಿದ್ಧಾರ್ಥ್ ಆತ್ಮಹತ್ಯೆ
ಬಿಜೆಪಿ ಐಟಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದರಿಂದಾಗಿ ನಾವೆಲ್ಲರೂ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಉದ್ಯಮಿ ಸಿದ್ದಾರ್ಥ ಸಾವಿಗೀಡಾಗಲು ಐಟಿಯವರೇ ಕಾರಣ ಎಂದು ಎಂಎಲ್‌ಸಿ ಪ್ರಕಾಶ್ ರಾಥೋಡ್ ಗುಡುಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ದಾಳಿ ಮತ್ತು ಅವರ ಕಿರುಕುಳದ ಕಾರಣದಿಂದ ಕಾಫಿ ದೊರೆ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಮೇಲೆ ಐಟಿಯಿಂದ ಹಲವು ದಾಳಿ ನಡೆಸಿ ಭಯ ಉಂಟು ಮಾಡಲಾಗಿದೆ. ಬಿಜೆಪಿ ಐಟಿ, ಇಡಿ ಸಂಸ್ಥೆಗಳನ್ನು ದುರಪಯೋಗ ಮಾಡಿಕೊಂಡು ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡಿಸಿ ಲಾಭ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಆದಾಯ ತೆರಿಗೆ ದಾಳಿಯನ್ನು ಕೇಂದ್ರದ ಪ್ರಚೋದನೆಯಿಂದ ಮಾಡಲಾಗುತ್ತಿದೆ. ರಾಜಕೀಯ ಪ್ರೇರಿತ ಐಟಿ ದಾಳಿಗಳು ಶಿಕ್ಷಾರ್ಹ ಅಪರಾಧವಾಗುತ್ತೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಅದಲ್ಲದೇ, ಎಂಟಿಬಿ ನಾಗರಾಜ್, ಚೆಲುವರಾಯ ಸ್ವಾಮಿ, ಭೀಮಣ್ಣನಾಯಕ್, ಸತೀಶ್ ಸೈಲ್, ಆರ್ ವಿ ದೇಶಪಾಂಡೆ, ಆನಂದ್ ಸಿಂಗ್, ಡಿ ಕೆ ಸುರೇಶ್, ಡಿ ಕೆ ಶಿವಕುಮಾರ್, ಕುಮಾರಸ್ವಾಮಿ ಅವರ ಚಾರ್ಟೆಡ್ ಅಕೌಂಟೆಂಟ್ಗಳ ಮನೆ ಮೇಲೂ ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯನವರ ನಿವಾಸದ ಮೇಲೂ ದಾಳಿ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಬೆಂಬಲಿಗರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.