ಬೆಂಗಳೂರು : ಭಾರತದಲ್ಲಿ ಅತಿಹೆಚ್ಚು ಜನ ಸಾವಿಗೀಡಾಗುತ್ತಿರುವ ಕಾಯಿಲೆಗಳ ಪೈಕಿ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದ್ದು, ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡಲು ಟಾಟಾ ಸಂಸ್ಥೆಯ ಸಹಯೋಗದಲ್ಲಿ ಜುಲೇಖಾ ಯೆನೆಪೋಯ ಆಂಕೊಲಾಜಿ ಸಂಸ್ಥೆಯನ್ನು ತೆರೆಯಲಾಗುತ್ತಿದೆ ಎಂದು (ಡೀಮ್ಡ್ ಯೂನಿರ್ವಿಸಿಟಿ) ಯೆನೆಪೋಯ ವಿವಿ ಉಪಕುಲಪತಿ ಡಾ. ಎಂ. ವಿಜಯಕುಮಾರ್ ತಿಳಿಸಿದರು.
ಈ ಕುರಿತು ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕ್ಯಾನ್ಸರ್ ಎಲ್ಲ ವಯೋಮಾನದವರಿಗೂ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಆರ್ಥಿಕವಾಗಿ ಕುಗ್ಗುವಂತೆ ಮಾಡಿದೆ. ಕೆಲವು ಕಡೆ ಕ್ಯಾನ್ಸರ್‌ಗೆ ಸೂಕ್ತ ಚಿಕಿತ್ಸೆ ಲಭಿಸದೇ ಇರುವುದು ಸಹ ಸಾವಿಗೆ ಕಾರಣವಾಗುತ್ತಿದೆ.
ಹೀಗಾಗಿ ಯೆನೆಪೋಯಾ ವಿಶ್ವವಿದ್ಯಾಲಯ (ಡೀಮ್ಡ್ ಯೂನಿವರ್ಸಿಟಿ) ಹಾಗೂ ಟಾಟಾ ಟ್ರಸ್ಟ್‌ನ ಸಹಯೋಗದಲ್ಲಿ ಇದೇ ಜೂನ್ 11 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಅತ್ಯಾಧುನಿಕ 'ಜುಲೇಖಾ ಯೆನೆಪೋಯಾ ಆಂಕೊಲಾಜಿ ಸಂಸ್ಥೆಯನ್ನು ಉದ್ಘಾಟಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್, ಈ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಈ ಸಂಸ್ಥೆ ಬಡವರಿಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಲಿದೆ ಎಂದು ಹೇಳಿದರು.
ಮುಂಬೈನ ಟಾಟಾ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಶ್ರೀನಾಥ್ ಮಾತನಾಡಿ, ಟಾಟಾ ಟ್ರಸ್ಟ್‌ಗಳು ಹಲವು ದಶಕಗಳಿಂದ ಕ್ಯಾನ್ಸರ್ ಆರೈಕೆಯಲ್ಲಿ ಪ್ರಮುಖ ಕೆಲಸ ಮಾಡುತ್ತಿವೆ. ದೇಶಾದ್ಯಂತ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಬೆಂಬಲ ಮತ್ತು ಸಾಮರ್ಥ್ಯ ಬೆಳೆಸುವಲ್ಲಿ ಅವರ ಪ್ರಯತ್ನಗಳು ಅಪಾರವಾಗಿವೆ. "ಟಾಟಾ ಟ್ರಸ್ಟ್ಸ್ ಭಾರತದಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ, ನಾವು ದೇಶಾದ್ಯಂತ ಕ್ಯಾನ್ಸರ್ ಆರೈಕೆಯ ಮೂಲ ಸೌಕರ್ಯವನ್ನು ನವೀಕರಿಸುತ್ತಿದ್ದೇವೆ ಎಂದು ಹೇಳಿದರು.
ಡಾ. ಟಾಟಾ ಟ್ರಸ್ಟ್‌ನ ಕ್ಯಾನ್ಸರ್ ಕೇರ್ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕ ಸಂಜೀವ್ ಚೋಪ್ರಾ ಮಾತನಾಡಿ, “ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಮತ್ತು ಕೈಗೆಟುಕುವ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ವಿಕಿರಣ ಮತ್ತು ಪರಮಾಣು ಔಷಧ ಕೇಂದ್ರದೊಂದಿಗೆ ಯೆನೆಪೊಯ ವೈದ್ಯಕೀಯ ಆಸ್ಪತ್ರೆ ನಮಗೆ ಬೆಂಬಲ ನೀಡಿರುವುದು ತುಂಬಾ ಸಂತೋಷವಾಗಿದೆ. ಈ ಕ್ಯಾನ್ಸರ್ ಕೇರ್ ಸೆಂಟರ್‌ನೊಂದಿಗೆ, ಉತ್ತರ ಕರ್ನಾಟಕ ಮತ್ತು ಹತ್ತಿರದ ಪ್ರದೇಶಗಳ ಜನರು ಕ್ಯಾನ್ಸರ್ ಚಿಕಿತ್ಸೆಗಾಗಿ ಇತರ ನಗರಗಳಿಗೆ ಪ್ರಯಾಣಿಸಬೇಕಾಗಿಲ್ಲ. ಈ ಕೇಂದ್ರದಿಂದ ರೋಗಿಗಳಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.