ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 2,000 ಕೋಟಿ ರೂಪಾಯಿ ಹೂಡಿಕೆಗೆ ಮುಂದಾದ ಟಾಟಾ ಟೆಕ್ನಾಲಜೀಸ್

ಟಾಟಾ ಟೆಕ್ನಾಲಜೀಸ್ ಕಂಪನಿಯು ರಾಜ್ಯದಲ್ಲಿ ಬೃಹತ್‌ ಮೊತ್ತದ ಹೂಡಿಕೆ ಮಾಡಿ ಮೂರು ಕಾಮನ್ ಎಂಜಿನಿಯರಿಂಗ್ ಫೆಸಿಲಿಟಿ ಸೆಂಟರ್ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

establishment-of-3-cef-centers-for-msmes-in-rs-2000-crore-by-tata-technologies
ಎಂಎಸ್ಎಂಇ ಗಳಿಗೆ 3 ಸಿಇಎಫ್​ ಕೇಂದ್ರಗಳ ಸ್ಥಾಪನೆ : ರಾಜ್ಯದಲ್ಲಿ 2000 ಕೋಟಿ ರೂ. ಹೂಡಿಕೆಗೆ ಟಾಟಾ ಟೆಕ್ನಾಲಜೀಸ್ ಪ್ರಸ್ತಾವ...ಎಂ.ಬಿ ಪಾಟೀಲ್

By

Published : Jul 13, 2023, 6:55 AM IST

ಬೆಂಗಳೂರು: ಪ್ರತಿಷ್ಠಿತ ಟಾಟಾ ಟೆಕ್ನಾಲಜೀಸ್ ಕಂಪನಿಯು 2,000 ಕೋಟಿ ರೂ. ಹೂಡಿಕೆ ಮಾಡಿ ರಾಜ್ಯದಲ್ಲಿ ಮೂರು ಸಾಮಾನ್ಯ ಎಂಜಿನಿಯರಿಂಗ್ ಸೌಲಭ್ಯಗಳ ಕೇಂದ್ರ (ಸಿಇಎಫ್‌ಸಿ- ಕಾಮನ್ ಎಂಜಿನಿಯರಿಂಗ್ ಫೆಸಿಲಿಟಿ ಸೆಂಟರ್)ಗಳನ್ನು ಸ್ಥಾಪಿಸಲು ಮುಂದೆ ಬಂದಿದೆ. ವಿಧಾನಸೌಧದಲ್ಲಿ ಬುಧವಾರ ಕಂಪನಿಯ ಉನ್ನತ ಅಧಿಕಾರಿಗಳು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಮಾತುಕತೆ ನಡೆಸಿದ್ದಾರೆ.

ವಿಶೇಷವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು (ಎಂಎಸ್ಎಂಇ) ಗಮನದಲ್ಲಿರಿಸಿಕೊಂಡು ಈ ಘಟಕಗಳ ಕೇಂದ್ರಗಳನ್ನು ಸ್ಥಾಪಿಸುವುದು ಕಂಪನಿಯ ಉದ್ದೇಶ. ಸರ್ಕಾರ‌ ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಇದನ್ನು ಸ್ಥಾಪಿಸುವ ಯೋಜನೆ ಇದ್ದು, ಟಾಟಾ ಟೆಕ್ನಾಲಜೀಸ್ ಶೇಕಡಾ 70ರಷ್ಟು ಹೂಡಿಕೆ ಮಾಡಿದರೆ ಸರ್ಕಾರದ ಪಾಲು ಶೇ 30ರಷ್ಟು ಇರಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.

ಎಂಎಸ್ಎಂಇಗಳಿಗಾಗಿ ಸಿಇಎಫ್‌ಸಿ ಸ್ಥಾಪನೆ ಸಂಬಂಧ ಪ್ರಸ್ತಾವನೆ ಸಲ್ಲಿಕೆಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದೆ. ಪ್ರತಿ ಒಂದು ಕೇಂದ್ರಕ್ಕೆ ಸುಮಾರು 630 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇವುಗಳಿಂದ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗುತ್ತಿರುವ ಅಡ್ವಾನ್ಸ್ ಮ್ಯಾನುಫ್ಯಾಕ್ಚರಿಂಗ್ 4.0, ಎಲೆಕ್ಟ್ರಿಕ್ ವೆಹಿಕಲ್ ಟೆಸ್ಟಿಂಗ್ ಮತ್ತು ಬಾಹ್ಯಾಕಾಶ ಹಾಗೂ ರಕ್ಷಣಾ ವಲಯದ ಉದ್ದಿಮೆಗಳಿಗೆ ಹೆಚ್ಚಿನ ಉಪಯೋಗ ಆಗುತ್ತದೆ. ಅದೇ ರೀತಿ ಈ ವಲಯಗಳ ಸ್ಟಾರ್ಟ್ ಅಪ್ ಗಳಿಗೂ ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅವರು ವಿವರಿಸಿದರು. ಈ ಪ್ರಸ್ತಾವ‌ ಸ್ವಾಗತಾರ್ಹ. ಸರ್ಕಾರವೂ ಎಂಎಸ್‌ಎಂಇಗಳನ್ನು ಬಲಪಡಿಸಲು ಒತ್ತು ಕೊಟ್ಟಿದೆ. ಪ್ರತಿ ಕೇಂದ್ರಕ್ಕೆ ಸುಮಾರು 5 ಎಕರೆಯಷ್ಟು ಜಾಗ ಬೇಕಾಗಿದ್ದು, ಇದನ್ನು ಎಲ್ಲಿ ಕೊಡಬೇಕೆಂಬ ಬಗ್ಗೆ ಬರುವ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.

ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಪವನ್ ಭಗೇರಿಯಾ, ಉಪಾಧ್ಯಕ್ಷ ಪುಷ್ಕರಾಜ್ ಕೌಲಗೂಡ್, ಮುಖ್ಯಸ್ಥ ಪ್ರವೀಣ್ ದಿವೇಕರ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗು ಆಯುಕ್ತ ಗುಂಜನ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಬೀದರ್​ ಜಿಲ್ಲೆಯಲ್ಲಿ ಸಿಪೆಟ್​ :ಬೀದರ್ ಜಿಲ್ಲೆಯಲ್ಲಿ ಸಿಪೆಟ್ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ) ಕೇಂದ್ರದ ಕಟ್ಟಡ ಕಾಮಗಾರಿಗೆ ಚಾಲನೆ ನೀಡುವ ಸಂಬಂಧ ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಸಚಿವ ಎಂ.ಬಿ.ಪಾಟೀಲ್ ಬುಧವಾರ ಸಮಾಲೋಚನೆ ನಡೆಸಿದರು. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಖೂಬಾ ಮತ್ತು ಸಚಿವರು ಭೇಟಿಯಾಗಿ ಚರ್ಚಿಸಿದರು.

ಸಿಪೆಟ್ ಕೇಂದ್ರದ ಸ್ಥಾಪನೆಗಾಗಿ ಜಿಲ್ಲಾಡಳಿತವು ಬೀದರ್ ಜಿಲ್ಲೆ ಔರಾದ ತಾಲ್ಲೂಕಿನ ಬಲ್ಲೂರ ಹತ್ತಿರ 10 ಎಕರೆ ಜಾಗವನ್ನು ಈಗಾಗಲೇ ಗುರುತಿಸಿದೆ. ಅಲ್ಲದೇ, ಕಳೆದ ವರ್ಷ ಇದರ ಭೂಮಿಪೂಜೆಯೂ ನಡೆದಿದೆ. ಮಂಜೂರಾಗಿರುವ ಸಿಪೆಟ್ ಕಟ್ಟಡಕ್ಕಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ 50ರಷ್ಟು ಅನುದಾನ ಕೊಟ್ಟಿದೆ. ರಾಜ್ಯ ಸರ್ಕಾರವು ತನ್ನ ಪಾಲಿನ ಶೇ 50ರಷ್ಟು ಹಣ ನೀಡಿ ಕಟ್ಟಡ ಕಾಮಗಾರಿಗೆ ಚಾಲನೆ ಕೊಡಬೇಕು ಎಂದರು.

ಇದೇ ಸಂದರ್ಭದಲ್ಲಿ ಖೂಬಾ, ಬೀದರ್ ಜಿಲ್ಲೆಯಲ್ಲಿ ಕೈಗಾರಿಕೋದ್ಯಮಗಳ ನಿರ್ಮಾಣಕ್ಕೆ ಒತ್ತು ನೀಡುವಂತೆ ಕೋರಿದರು. ಜಿಲ್ಲೆಯಲ್ಲಿ ಉದ್ದಿಮೆಗಳ ಸ್ಥಾಪನೆಗೆ ಹೂಡಿಕೆ ಮಾಡಲು ಕೆಲವರು ಈ ಹಿಂದೆ ಆಸಕ್ತಿ ತೋರಿದ್ದರು. ಆದರೆ ಕೋವಿಡ್‌ನಿಂದಾಗಿ ಹಿನ್ನಡೆಯಾಗಿತ್ತು. ಈಗ ಪುನಃ ಆಸಕ್ತರನ್ನು ಜಿಲ್ಲೆಯಲ್ಲಿ ಉದ್ಯಮಗಳ ಸ್ಥಾಪನೆಗೆ ಆಹ್ವಾನಿಸಬೇಕು ಎಂದು ತಿಳಿಸಿದರು.

ಬೀದರ್ ಭಾಗದ ಜನ ಉದ್ಯೋಗ ಹುಡುಕಿಕೊಂಡು ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಉದ್ದಿಮೆಗಳು ಸ್ಥಾಪನೆಯಾದರೆ ವಲಸೆಗೆ ತಡೆ ಬೀಳುತ್ತದೆ ಎಂದರು. ಶಾಸಕರಾದ ಶೈಲೇಂದ್ರ ಬೆಲ್ದಾಳೆ ಮತ್ತು ಸಿದ್ದು ಪಾಟೀಲ್ ಇದ್ದರು.

ಇದನ್ನೂ ಓದಿ :ಸುಳ್ಳಿನ ನೋಬೆಲ್ ಪ್ರಶಸ್ತಿಯನ್ನು ಸಿದ್ದರಾಮಯ್ಯನವರಿಗೆ ನೀಡಬೇಕು: ಕೆ.ಎಸ್.ಈಶ್ವರಪ್ಪ

ABOUT THE AUTHOR

...view details