ಬೆಂಗಳೂರು:ಬಜೆಟ್ ಘೋಷಣೆಯಂತೆ ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ Karnataka Institute of Technology (KIT)ಯಾಗಿ ಉನ್ನತೀಕರಿಸಲು ಹಾಗೂ ಯೋಜನಾ ಅನುಷ್ಠಾನಕ್ಕೆ ಕಾರ್ಯಪಡೆಯನ್ನು ರಚಿಸಿ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಮೊದಲ ಹಂತವಾಗಿ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರಿನ ಎಸ್ಕೆಎಸ್ಜೆಐಟಿ (SKSJIT), ಹಾವೇರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕೆ.ಆರ್.ಪೇಟೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ತಳಕಲ್ ಕೊಪ್ಪಳದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಉನ್ನತೀಕರಣಕ್ಕಾಗಿ ಗುರುತಿಸಿದೆ. ಈ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣಕ್ಕೆ 94 ಕೋಟಿ ರೂ. ಅನುದಾನದ ಅಗತ್ಯತೆ ಇದೆ.
ಮೊದಲ ಹಂತವಾಗಿ ರಾಜ್ಯದಲ್ಲಿನ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು "Karnataka Institute of Technology" ಗಳನ್ನಾಗಿ ಉನ್ನತೀಕರಿಸಿ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವ ಯೋಜನೆಗೆ ವಿವರವಾದ ಕಾರ್ಯವರದಿಯನ್ನು ಸಲ್ಲಿಸುವ ನಿಟ್ಟಿನಲ್ಲಿ ಶೈಕ್ಷಣಿಕ ತಜ್ಞರ ಕಾರ್ಯಪಡೆ ರಚಿಸಲಾಗಿದೆ. ಬೆಂಗಳೂರು ಐಐಐಟಿಯ ಸಂಸ್ಥಾಪಕ ನಿರ್ದೇಶಕ ಸಡಗೋಪನ್ ನೇತೃತ್ವದಲ್ಲಿ ಏಳು ಸದಸ್ಯರ ಕಾರ್ಯಪಡೆ ರಚನೆ ಮಾಡಲಾಗಿದೆ.