ಬೆಂಗಳೂರು :ಕೊರೊನಾ ಪಾಸಿಟಿವ್ ಬಂದವರು ಇನ್ಮುಂದೆ ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ಮನೆಯಲ್ಲೇ ಚಿಕಿತ್ಸೆ ಪಡೆಯಲು ಅವಕಾಶವಿದೆ. ಅಂತ್ಯಸಂಸ್ಕಾರಕ್ಕೆ ಮನೆಯವರಿಗೆ ಪಿಪಿಎ ಕಿಟ್ ಹಾಕಿಕೊಂಡು ಭಾಗವಹಿಸಲು ಅವಕಾಶ ನೀಡಬೇಕೆಂಬುದರ ಬಗ್ಗೆ ನಾಳೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ವಿಧಾನಸೌಧದಲ್ಲಿ ಇಂದು ಸಂಜೆ ಟಾಸ್ಕ್ ಪೋರ್ಸ್ ಕಮಿಟಿ ಸದಸ್ಯರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್‌ಲಾಕ್ ಸಂಬಂಧ ಸಭೆಯಲ್ಲಿ ಚರ್ಚಿಸಿದ್ದೇವೆ. ಕೋವಿಡ್ ಹೆಚ್ಚಳದ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ, ಬಿಬಿಎಂಪಿ 8 ವಲಯದ ಅಧಿಕಾರಿಗಳ ಜತೆ ಬೆಳಗ್ಗೆ ಸಭೆ ನಡೆಸಿದ್ದೇನೆ ಎಂದರು.
ಸಾರ್ವಜನಿಕರ ನಿರ್ಲಕ್ಷ್ಯ:ಹೆಚ್ಚಿನ ಸೋಂಕಿತರು ನಮ್ಮಲ್ಲಿ ಕಂಡು ಬಂದಿದ್ದಾರೆ. ನಮ್ಮಲ್ಲಿ ನಿಧಾನವಾಗಿ ಏರಿಕೆಯಾಗಿದೆ. ಲಾಕ್‌ಡೌನ್ ವೇಳೆ ಕಡಿಮೆ ಇತ್ತು. ಅನ್‌ಲಾಕ್ ನಂತರ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಸಾರ್ವಜನಿಕರ ನಿರ್ಲಕ್ಷವೇ ಕಾರಣ. ಕೋವಿಡ್ ಸೋಂಕು ಹೊರಟು ಹೋಗಿದೆ ಎಂದು ತಿಳಿದು ಕೊಂಡಿದ್ದಾರೆ. ಇದರಿಂದ ಸಾವಿನ ಪ್ರಮಾಣ ಕಡಿಮೆ ಎಂಬ ನಿರ್ಲಕ್ಷ್ಯವಿದೆ.
ಜೊತೆಗೆ ಮಾಸ್ಕ್ ಬಳಕೆ ಕಡಿಮೆಯಾಗಿದೆ. ಭೌತಿಕ ಅಂತರ ಪಾಲಿಸದಿರುವುದು, ಹೆಚ್ಚು ಸಮಾರಂಭಗಳು ನಡೆಯುತ್ತಲೇ ಇರುವುದು, ಸಾವಿರಾರು ಜನ ಕಾರ್ಯಕ್ರಮಗಳಲ್ಲಿ ಸೇರುತ್ತಿರುವುದು. ಇದೆಲ್ಲವೂ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸ್ಪಷ್ಟನೆ ನೀಡಿದರು.
ಕಟ್ಟುನಿಟ್ಟಿನ ಕ್ರಮ :ಕೊರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಸಹ ಬಿಗಿ ಕ್ರಮಕ್ಕೆ ಸಲಹೆ ನೀಡಿದ್ದಾರೆ. ಹೀಗಾಗಿ, ಕಟ್ಟುನಿಟ್ಟಿನ ಕ್ರಮ ಅನಿವಾರ್ಯ. ನಾಳೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಸಭೆ, ಸಮಾರಂಭಗಳು ನಡೆಯಲು ಒಪ್ಪಿಗೆ ಅನಿವಾರ್ಯ. ಶಿಕ್ಷಣ ಸಂಸ್ಥೆಗಳನ್ನು ಅದಕ್ಕೇ ಇನ್ನೂ ತೆರೆದಿಲ್ಲ.
ನಮಗೆ ಎಲ್ಲರ ಜೀವ ರಕ್ಷಣೆ ಮುಖ್ಯ. ಹೀಗಾಗಿ, ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. 11 ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸ್ ಹೆಚ್ಚಾಗುತ್ತಿವೆ. ಏಳು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸೋಂಕು ಕಂಡು ಬರುತ್ತಿದೆ. ಜನರು ಮಾರ್ಗಸೂಚಿ ಪಾಲಿಸಬೇಕು. ಎಲ್ಲಾ ಕಡೆ ಟೆಸ್ಟ್ ಪ್ರಾರಂಭಿಸಿದ್ದೇವೆ. ರೋಗ ಲಕ್ಷಣ ಇರುವವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ರಾಜ್ಯದ ಜನರಿಗೆ ಸಚಿವ ಸುಧಾಕರ್ ಮನವಿ ಮಾಡಿದರು.
ರಾಜ್ಯದಲ್ಲಿ ಸಾವಿನ ಪ್ರಮಾಣ 1.5ಕ್ಕೆ ಇಳಿಕೆಯಾಗಿದೆ. ಪಾಸಿಟಿವ್ ಬಂದವರು ತಮ್ಮ ನೆರೆಹೊರೆಯವರ ಜೊತೆ ಮಾಹಿತಿ ಹಂಚಿಕೊಳ್ಳಿ. ಆಗ ರೋಗ ಲಕ್ಷಣದ ಬಗ್ಗೆ ಅವರಿಗೆ ಅರಿವಾಗುತ್ತದೆ. ರೋಗ ಎದುರಿಸುವ ಶಕ್ತಿ ಸಿಗುತ್ತದೆ ಎಂದು ಸಲಹೆ ಮಾಡಿದರು.