ಬೆಂಗಳೂರು :ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಸಂಬಂಧ ವರದಿ ಕೇಳಿರುವ ಕೆಪಿಸಿಸಿ ಅಧ್ಯಕ್ಷರಿಗೆ ಮಾಹಿತಿ ನೀಡಲು ಶಾಸಕ ತನ್ವೀರ್ ಸೇಠ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಕಳೆದ ವಾರ ಮೇಯರ್ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾದ ಹಿನ್ನಡೆಯ ಸಂಬಂಧ ಮಾಹಿತಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಜಿ ಸಚಿವ ತನ್ವೀರ್ ಸೇಠ್ಗೆ ಸೂಚಿಸಿದ್ದರು. ಈ ಹಿನ್ನೆಲೆ ಐದು ಪುಟಗಳ ವಿಸ್ತೃತ ವರದಿ ಸಿದ್ಧಪಡಿಸಿಕೊಂಡು ತನ್ವೀರ್ ಸೇಠ್ ಇಂದು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಅನುಪಸ್ಥಿತಿ ಇರುವ ಹಿನ್ನೆಲೆ ಸಂಜೆಯ ವೇಳೆಗೆ ವರದಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಅಗತ್ಯವೆನಿಸಿದರೆ ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ತಮ್ಮ ವಿವರಣೆಯನ್ನು ಅವರು ನೀಡಲಿದ್ದಾರೆ.
ಮೈಸೂರು ಮೇಯರ್ ಚುನಾವಣೆ ವೇಳೆ ಕಾಂಗ್ರೆಸ್‌ಗೆ ದೊಡ್ಡ ಮುಖಭಂಗವಾಗಿತ್ತು. ಇಡೀ ಪ್ರಕರಣದ ಹಿಂದೆ ತನ್ವೀರ್ ಸೇಠ್ ಹೆಸರು ಕೇಳಿ ಬಂದ ಹಿನ್ನೆಲೆ ವರದಿ ಕೇಳಿದ್ದು ಅದನ್ನ ತ್ವರಿತವಾಗಿ ಸಿದ್ಧಪಡಿಸಿಕೊಂಡು ತನ್ವೀರ್ ಸೇಠ್ ಆಗಮಿಸಿದ್ದಾರೆ.
ಇಡೀ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ ಎಂಬ ಆರೋಪ ಕೂಡ ಇದೆ. ತನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಆದರೆ, ತನ್ನ ತಪ್ಪು ಇಲ್ಲ ಎಂದು ಪ್ರತಿಪಾದಿಸಿರುವ ಸೇಠ್ ಅವರು, ಅದಕ್ಕೆ ಅಗತ್ಯವಿರುವ ದಾಖಲೆಯೊಂದಿಗೆ ವರದಿ ಸಿದ್ಧಪಡಿಸಿಕೊಂಡು ಆಗಮಿಸಿದ್ದಾರೆ.