ಬೆಂಗಳೂರಿನಲ್ಲಿ ಡಿಎಂಕೆ ಮುಖಂಡನ ಮೇಲೆ ಹಲ್ಲೆ ಪ್ರಕರಣ ಬೆಂಗಳೂರು: ತಮಿಳುನಾಡಿನ ಡಿಎಂಕೆ ಮುಖಂಡ ಹಾಗು ರೌಡಿಶೀಟರ್ ವಿ.ಕೆ.ಗುರುಸ್ವಾಮಿ (64) ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಭೀಕರ ದೃಶ್ಯಾವಳಿಗಳು ಹೋಟೆಲ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸೆಪ್ಟೆಂಬರ್ 4 ರಂದು ಸಂಜೆ 4:30ರ ಸುಮಾರಿಗೆ ಬಾಣಸವಾಡಿಯ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ಹೋಟೆಲ್ನಲ್ಲಿ ಕುಳಿತಿದ್ದ ಗುರುಸ್ವಾಮಿ ಮೇಲೆ ಐವರು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಬಾಣಸವಾಡಿ ಠಾಣಾ ಪೊಲೀಸರು ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಕಲೆಹಾಕಿದ್ದರು. ಅದರನ್ವಯ ಮಧುರೈನ ನಟೋರಿಯಸ್ ರೌಡಿಶೀಟರ್ ಪಾಂಡಿಯನ್ ಬಣದ ಕಾರ್ತಿಕ್, ವಿನೋದ್ ಕುಮಾರ್, ಪ್ರಸನ್ನ ಎಂಬವರನ್ನು ಬಂಧಿಸಿದ್ದರು.
ಮಧುರೈನಲ್ಲಿ ರಾಜಕೀಯವಾಗಿ ಸಕ್ರಿಯವಾಗಿದ್ದ ಗುರುಸ್ವಾಮಿ ಹಲವು ರಾಜಕೀಯ ಮುಖಂಡರ ಆಪ್ತನಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಅಪರಾಧ ಹಿನ್ನೆಲೆಯನ್ನೂ ಹೊಂದಿರುವ ಇವರ ವಿರುದ್ಧ ಕಿರುತರೈ ಠಾಣೆಯಲ್ಲಿ ರೌಡಿಶೀಟ್ ಸಹ ಇದೆ. ಎಂಟು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ತಮಿಳುನಾಡಿನ ರೌಡಿಶೀಟರ್ ಗುರುಸ್ವಾಮಿ ಮೇಲೆ ಹತ್ಯೆ ಯತ್ನ ಪ್ರಕರಣ : ಆರೋಪಿ ಬಂಧನ
ಪೂರ್ವ ವಿಭಾಗದ ಡಿಸಿಪಿ ಹೇಳಿದ್ದೇನು?:"ಮಧುರೈ ಮೂಲದವನಾಗಿರೋ ವಿ.ಕೆ.ಗುರುಸ್ವಾಮಿ ಮೇಲೆ ಹಲವು ಕೊಲೆ, ಕೊಲೆ ಯತ್ನ ಕೇಸ್ಗಳಿದ್ದು, ಕಿರುತೈ ಎಂಬ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಒಬ್ಬ ವ್ಯಕ್ತಿ ಜೊತೆ ಈತನಿಗೆ 30 ವರ್ಷಗಳಿಂದ ವೈಷಮ್ಯ ಇತ್ತು. ನಗರದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ವೊಬ್ಬನ ಜೊತೆ ಮನೆ ಹುಡುಕಿ ಬಳಿಕ ಸುಖಸಾಗರ್ ಹೊಟೇಲ್ನಲ್ಲಿ ಏಜೆಂಟ್ ಜೊತೆ ಕಾಫಿ ಕುಡಿಯೋಕೆ ಬಂದಿದ್ದರು."
"ಈ ವೇಳೆ ಈತನ ಎದುರಾಳಿ ಗ್ಯಾಂಗ್ನ ಐವರು ಆರೋಪಿಗಳು ಅಟ್ಯಾಕ್ ಮಾಡಿದ್ದಾರೆ. ಪರಿಣಾಮ ತೀವ್ರವಾಗಿ ಹಲ್ಲೆಗೊಳಗಾದ ಗುರುಸ್ವಾಮಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತನ ಜೊತೆಗೆ ಇದ್ದ ರಿಯಲ್ ಎಸ್ಟೇಟ್ ಏಜೆಂಟ್ಗೂ ಗಾಯಗಳಾಗಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಘಟನೆಯ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದರು.
ಸ್ನೇಹಿತನ ಹತ್ಯೆಗೆ ಸಂಚು ರೂಪಿಸಿದ್ದ ಕಿರಾತಕರು (ಪ್ರತ್ಯೇಕ ಘಟನೆ): ಗುಂಡಿಕ್ಕಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರು ಬಂಧಿಸಿರುವ ಘಟನೆ ಸೆಪ್ಟೆಂಬರ್ 17ರಂದು ವರದಿಯಾಗಿದೆ. ಮೊಹಮ್ಮದ್ ಜುಬೇರ್ ಹಾಗೂ ಪುರ್ಕಾನ್ ಆಲಿಖಾನ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಒಂದು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಇವರು ರೌಡಿಶೀಟರ್ ಅನೀಸ್ ಹತ್ಯೆ ಮಾಡಲು ಸಂಚು ರೂಪಿಸಿದ್ದರು.
ಈ ಮೂವರ ನಡುವೆ ಹಣಕಾಸಿನ ವಿಚಾರಕ್ಕಾಗಿ ವೈಮನಸ್ಸು ಮೂಡಿತ್ತು. 2021ರಲ್ಲಿ ಪ್ರಕರಣವೊಂದರ ಸಂಬಂಧ ಅನೀಸ್ ಜೈಲು ಸೇರಿದ್ದ. ಇದೇ ವೇಳೆ ಬಂಧಿತ ಆರೋಪಿಗಳ ಸಹಚರನಾಗಿದ್ದ ಆಲಿ ಎಂಬಾತನ ಕೊಲೆಯಾಗಿತ್ತು. ಅನೀಸ್ ಜೈಲಿನಲ್ಲಿದ್ದುಕೊಂಡೇ ಆಲಿನನ್ನು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಆರೋಪಿಗಳು ಅನೀಸ್ನ ಹತ್ಯೆ ಮಾಡಲು ಒಂದು ತಿಂಗಳಿಂದ ಸಂಚು ರೂಪಿಸಿಕೊಂಡಿದ್ದರು.ಇದಕ್ಕಾಗಿ ಮಹಾರಾಷ್ಟ್ರದಿಂದ ಪಿಸ್ತೂಲ್ ತರಿಸಿಕೊಂಡಿದ್ದರು. ಜೈಲಿಂದ ಬಿಡುಗಡೆಯಾಗಿದ್ದ ಅನೀಸ್ ಹತ್ಯೆ ಮಾಡಲು ಓಡಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಹಳೆ ವೈಷಮ್ಯ ಹಿನ್ನೆಲೆ; ತಮಿಳುನಾಡು ಮೂಲದ ವ್ಯಕ್ತಿ ಮೇಲೆ ಟೀ ಕುಡಿಯುತ್ತಿರುವಾಗಲೇ ಮಾರಕಾಸ್ತ್ರಗಳಿಂದ ಅಟ್ಯಾಕ್