ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಾವು ಎಲ್ಲಿ ಊಟ ಮಾಡುತ್ತೇವೆ ಅಂತ ಗೂಢಚಾರಿಕೆ ಶುರು ಮಾಡಿದ್ದಾರಾ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಪ್ರಶ್ನಿಸಿದ್ದಾರೆ. ದಯಾನಂದ ಪೈ ಜತೆ ಊಟ ಮಾಡಿದ ಫೋಟೋ ರಿಲೀಸ್ ಮಾಡಿ ತಮ್ಮ ವಿರುದ್ಧ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಎಂಎಸ್ ನ 90% ಸೀಟ್ ಗಳು ಸಿಇಟಿ ಮೂಲಕವೇ ಭರ್ತಿ ಆಗ್ತಿವೆ. ದಯಾನಂದ ಪೈ ಅವರು ಗೌರವಾನ್ವಿತ ವ್ಯಕ್ತಿ. ಸಾಕಷ್ಟು ಸಾಮಾಜಿಕ ಕೊಡುಗೆ ಕೊಟ್ಟಿರೋರು. ಕುಮಾರಸ್ವಾಮಿ, ದೇವೇಗೌಡ ಅವರಿಗೆ ಪರಿಚಯ ಇರೋರು ದಯಾನಂದ ಪೈ ಎಂದು ಹೇಳಿದರು.
ಕಾನೂನು ಮೀರಿ ಯಾವುದನ್ನೂ ಮಾಡಿಲ್ಲ: ಕುಮಾರಸ್ವಾಮಿ ಅವರಿಗೆ ಪರಿಚಯ ಇಲ್ಲದವರ ಜತೆ ಏನೂ ಕುಳಿತು ಊಟ ಮಾಡಿಲ್ಲ ನಾನು. ದಯಾನಂದ ಪೈ ಜತೆ ಊಟ ಮಾಡಿದ್ದನ್ನೂ ಪ್ರಶ್ನೆ ಮಾಡಿದ್ದಾರೆ. ಊಟ ಮಾಡಿದ್ದನ್ನು ಪ್ರಶ್ನಿಸುವ ಮಟ್ಟಕ್ಕೂ ಎಚ್ಡಿಕೆ ಇಳಿದಿದ್ದಾರೆ. ಇಂಥ ಕೆಳಮಟ್ಟಕ್ಕೂ ಇಳಿಯಬಹುದು ಅಂತ ಕುಮಾರಸ್ವಾಮಿ ಸಾಬೀತು ಮಾಡಿದ್ದಾರೆ ಇವತ್ತು. ಯಾರಿಗೂ ಯಾವುದನ್ನೂ ಬರೆದುಕೊಡಲು ಆಗಲ್ಲ. ಏನೇ ಆಗಿದ್ರೂ ಕಾನೂನು ಪ್ರಕಾರವೇ ಆಗಿದೆ. ಕಾನೂನು ಮೀರಿ ಯಾವುದನ್ನೂ ನಾನು ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಸಚಿವ ಅಶ್ವತ್ಥ್ ನಾರಾಯಣ್ ವಾಕ್ಸಮರ: ಆ ಮೂಲಕ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಕುಮಾರಸ್ವಾಮಿ ನಡುವೆ ವಾಕ್ಸಮರ ಜೋರಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಜಾತಿ ಹೆಸರಲ್ಲಿ ಹೇಳಿಕೆ ನೀಡಿರುವುದನ್ನು ಸಚಿವ ಅಶ್ವತ್ಥನಾರಾಯಣ್ ಸುದ್ದಿಗೋಷ್ಟಿ ನಡೆಸಿ ಖಂಡಿಸಿದ್ದರು. ಹೆಚ್ಡಿಕೆ ಇಷ್ಟು ಕೆಳಮಟ್ಟಕ್ಕೆ ಹೋಗುತ್ತಾರೆ ಎಂದುಕೊಂಡಿರಲಿಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.
ಪೈ ಜತೆ ಅಶ್ವತ್ಥ್ ಊಟ, ಅಕ್ರಮದ ಆರೋಪ :ಈ ಸಂಬಂಧ ಕುಮಾರಸ್ವಾಮಿ ಮಾಧ್ಯಮಗೋಷ್ಟಿ ನಡೆಸಿ ಸಚಿವ ಅಶ್ವತ್ಥನಾರಾಯಣ ವಿರುದ್ಧ ಬಿಎಂಎಸ್ ಅಕ್ರಮದ ಆರೋಪ ಮಾಡಿ, ಬಿಎಂಎಸ್ ಟ್ರಸ್ಟ್ ಮುಖ್ಯಸ್ಥ ದಯಾನಂದ ಪೈ ಜೊತೆ ಸಚಿವ ಅಶ್ವತ್ಥ್ ನಾರಾಯಣ ಅವರು ಊಟ ಮಾಡುತ್ತಿರುವ ಫೋಟೋವನ್ನು ಪ್ರದರ್ಶಿಸಿದ್ದರು.