ಕರ್ನಾಟಕ

karnataka

ETV Bharat / state

ಹೊರ ರಾಜ್ಯಗಳಿಂದ ಬರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಡಿಸಿಎಂ ಕಾರಜೋಳ

ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಲಸಿಗರು ಬರುವ ನಿರೀಕ್ಷೆ ಇದ್ದು, ತಪಾಸಣೆ ನಡೆಸದೇ ಯಾವುದೇ ಕಾರಣಕ್ಕೂ ಹೊರ ರಾಜ್ಯಗಳಿಂದ ಬರುವವರನ್ನು ಜಿಲ್ಲೆಗೆ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಡಿಸಿಎಂ ಗೋವಿಂದ ಕಾರಜೋಳ ಖಡಕ್ ಸೂಚನೆ ನೀಡಿದ್ದಾರೆ.

Take strict action against those coming from outside states: dcm karajola
ಹೊರ ರಾಜ್ಯಗಳಿಂದ ಬರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಡಿಸಿಎಂ ಗೋವಿಂದ ಕಾರಜೋಳ

By

Published : May 29, 2020, 9:58 PM IST

ಬೆಂಗಳೂರು: ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ 35,723 ಜನರು ಕಲಬುರಗಿಗೆ ಬಂದಿದ್ದು, ಅವರನ್ನು 547 ಕ್ವಾರಂಟೈನ್ ಕೇಂದ್ರಗಳಲ್ಲಿ ಕ್ವಾರಂಟೈನ್​​​​ನಲ್ಲಿಡಲಾಗಿದ್ದು, ಅವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಕಲಬುರಗಿ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕಲಬುರಗಿ ಜಿಲ್ಲೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ 35,723 ವಲಸಿಗರು ಆಗಮಿಸಿದ್ದು, 13,701 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಒಟ್ಟಾರೆ ಕಲಬುರ್ಗಿಯಲ್ಲಿ ಈವರೆಗೆ 20,743 ಕೋವಿಡ್-19 ಪರೀಕ್ಷೆ ನಡೆಸಲಾಗಿದೆ.

ಜಿಲ್ಲೆಯಲ್ಲಿ 4,34,438 ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಗಿದೆ. ಅಂತರ್ ರಾಜ್ಯ ಚೆಕ್​​​ಪೋಸ್ಟ್​​ಗಳಲ್ಲಿ 35,723 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. 174 ಜನರನ್ನು ಐಸೋಲೇಷನ್​​​ನಲ್ಲಿ ಇಡಲಾಗಿದೆ.

ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಲಸಿಗರು ಬರುವ ನಿರೀಕ್ಷೆ ಇದ್ದು, ತಪಾಸಣೆ ನಡೆಸದೇ ಯಾವುದೇ ಕಾರಣಕ್ಕೂ ಹೊರ ರಾಜ್ಯಗಳಿಂದ ಬರುವವರನ್ನು ಜಿಲ್ಲೆಗೆ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಖಡಕ್ ಸೂಚನೆ ನೀಡಿದರು. ಜೇವರ್ಗಿಯಲ್ಲಿ ಹೆಚ್ಚು ಜನರು ಭೀಮಾ ನದಿ ತೀರದ ಮೂಲಕ ಜಿಲ್ಲೆಗೆ ಆಗಮಿಸುತ್ತಿರುವ ಮಾಹಿತಿ ಇದೆ. ತಪಾಸಣೆಗೊಳಗಾಗದೇ ನೇರವಾಗಿ ಅವರ ಊರುಗಳಿಗೆ ತೆರಳಿ, ಇತರರಿಗೆ ಹರಡದಂತೆ ಮುಂಜಾಗೃತೆ ವಹಿಸಬೇಕು.

ಅನಧಿಕೃತವಾಗಿ ಜಿಲ್ಲೆಗೆ ಪ್ರವೇಶಿಸಿ ತಿರುಗಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಹೆಚ್ಚು ನಿಗಾವಹಿಸಬೇಕು ಎಂದರು.

ಅಲ್ಲದೇ ಯಾವುದೇ ನಿರಾಶ್ರಿತರು, ವಲಸಿಗರು ಹೊರ ಜಿಲ್ಲೆಗಳಿಂದ ಬಂದು ಕ್ವಾರಂಟೈನ್‍ನಲ್ಲಿರುವವರು ಹಸಿವಿನಿಂದ ಬಳಲಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಪೇಕ್ಷೆ ಇದಾಗಿದ್ದು, ಈ ಕುರಿತು ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕು. ಆಹಾರ ಸಾಮಗ್ರಿಗಳಲ್ಲಿ ದುರುಪಯೋಗವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದು, ಈ ಕುರಿತು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಅಭಾವ ಇರುವ ಸಾಧ್ಯತೆ ಇದೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಬಯಸುವವರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಒದಗಿಸಬೇಕು. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಸ್ಪಚ್ಚತೆಯನ್ನು ಕಾಪಾಡಬೇಕು. ನಗರ ಪ್ರದೇಶಗಳಲ್ಲೂ ವಿವಿಧ ಇಲಾಖೆಗಳ ಮೂಲಕ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ಹಿನ್ನೆಲೆ ಘೋಷಿಸಿದ ಎಲ್ಲ ಪರಿಹಾರ ಯೋಜನೆಗಳು ತ್ವರಿತವಾಗಿ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಕಲಬುರಗಿ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್, ಡಿಸಿಎಂ ಆಪ್ತ ಕಾರ್ಯದರ್ಶಿ ವಿ. ಶ್ರೀನಿವಾಸ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ವರದಿ ನೀಡಲು ಸೂಚನೆ: ಇದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರು ಅವರು ಅಧಿಕಾರಿಗಳಿಗೆ ಧಮಕಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ಮಾತನಾಡುತ್ತೇನೆ ಎಂದು ಹೇಳಿದರು. ರಾಜಕೀಯ ಬೆಳವಣಿಗೆ ಕುರಿತು ಹಾಗೂ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಯತ್ನಾಳ್ ಸಭೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ABOUT THE AUTHOR

...view details