ಬೆಂಗಳೂರು:ನೀವು ಈಗಲೇ ಪಕ್ಷವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ. ಇಲ್ಲವಾದರೆ ರಾಜ್ಯಕ್ಕೆ ಕರಾಳ ದಿನ ಬರುತ್ತದೆ ಎಂದು ಶಾಸಕ ಬಸನಗೌಡ ಯತ್ನಾಳ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಲಹೆ ಕೊಟ್ಟರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ಪರವಾಗಿ ಈ ಬಜೆಟ್ಗೆ ವಿರೋಧ ಮಾಡುತ್ತೇನೆ. ಬಿಜೆಪಿಯ ಕೆಲವರ ಪರವಾಗಿಯೂ ಬಜೆಟ್ ವಿರೋಧಿಸುತ್ತೇನೆ. ಏಕೆಂದರೆ ಅಲ್ಲಿಯೂ ಕೆಲವರಿಗೆ ಅಸಮಾಧಾನ ಇದೆ. ಅವರಿಗೆ ಮಾತನಾಡಲು ಆಗುವುದಿಲ್ಲ ಎಂದು ಯತ್ನಾಳ್ ಕಡೆ ನೋಡಿ ಕಾಲೆಳೆದರು.
ಆಗ ಎದ್ದು ನಿಂತ ಯತ್ನಾಳ್, ಸರ್, ಇಡೀ ಕಾಂಗ್ರೆಸ್ ಈ ಬಜೆಟ್ಗೆ ವಿರೋಧ ಮಾಡುತ್ತೋ? ಅಥವಾ ನಿಮ್ಮ ಬಣ ಮಾತ್ರ ವಿರೋಧ ಮಾಡುತ್ತೋ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರಾಜ್ಯ ಬಿಜೆಪಿ ಸರ್ಕಾರ ಸ್ತ್ರೀ ವಿರೋಧಿ ಬಜೆಟ್ ಮಂಡನೆ ಮಾಡಿದೆ: ಡಿಕೆಶಿ
ನಿಮ್ಮ ಪರವಾದ ಶಾಸಕರು ಬಿಟ್ಟರೆ ಬೇರೆ ಯಾವ ಶಾಸಕರು ಇಲ್ಲಿಲ್ಲ. ನೀವು ಈಗಲೇ ಸ್ವಲ್ಪ ಜಾಗೃತರಾಗಿ, ಪಕ್ಷವನ್ನು ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಿ. ಇಲ್ಲವಾದರೆ ಕರ್ನಾಟಕಕ್ಕೆ ಕರಾಳ ದಿನ ಬರುತ್ತದೆ. ಹಾಗಾಗಿ ದಯವಿಟ್ಟು ನೀವು ಗಟ್ಟಿಯಾಗಿ ನಿಲ್ಲಬೇಕು ಎಂದು ಯತ್ನಾಳ್ ಮನವಿ ಮಾಡಿದರು. ಅದಕ್ಕೆ ಸಿದ್ದರಾಮಯ್ಯ ಆಯ್ತು ಎಂದು ನಕ್ಕು ತಮ್ಮ ಮಾತು ಮುಂದುವರೆಸಿದರು.