ಬೆಂಗಳೂರು: ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪಕ್ಕೆ ಗುರಿಯಾಗಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಅಷ್ಟೇ ಅಲ್ಲದೆ, ರಾಜಸ್ಥಾನದಲ್ಲಿ ನಡೆದಿರುವ ಬಾಲಕನ ಹತ್ಯೆ ಮಾಡಿದವರನ್ನೂ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘ ಹಾಗೂ ಸಾಮೂಹಿಕ ಸಂಘಟನೆಗಳ ವೇದಿಕೆ, ದಸಂಸ, ರಾಜ್ಯ ಮಹಿಳಾ ಒಕ್ಕೂಟದ ಸೇರಿದಂತೆ ವಿವಿಧ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ಶಿವಮೂರ್ತಿ ಶರಣರ ವಿರುದ್ಧ ಕಾನೂನು ಕ್ರಮ ಜರುಗಿಸಿ: ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಗುಜರಾತ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಬದುಕುಳಿದ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಗುಜರಾತ್ ಸರ್ಕಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿರುವ ಕ್ರಮ ಖಂಡನಾರ್ಹವಾಗಿದೆ ಎಂದು ಇದೇ ವೇಳೆ ಹರಿಹಾಯ್ದರು.
ಬಿಲ್ಕಿಸ್ ಬಾನು ಗರ್ಭಿಣಿಯಿದ್ದಾಗ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳಿಗೆ 15 ವರ್ಷ ಶಿಕ್ಷೆಯಾಗಿತ್ತು. ಆದರೆ, ಅವಧಿಗೂ ಮುನ್ನವೇ ಅವರನ್ನು ಬಿಡುಗಡೆಗೊಳಿಸಿರುವುದು ಖಂಡನಾರ್ಹ. ಸಾಮೂಹಿಕ ಅತ್ಯಾಚಾರದಂತಹ ಪ್ರಕರಣದಲ್ಲಿ ಕೇಂದ್ರದ ಒಪ್ಪಿಗೆ ಪಡೆಯದೆ ರಾಜ್ಯ ಮುಂದುವರೆಯುವಂತಿಲ್ಲ. ಆದರೆ, ಈ ವಿಷಯದಲ್ಲಿ ಉಲ್ಲಂಘನೆಯಾಗಿದೆ. ಗುಜರಾತ್ ಸರ್ಕಾರಕ್ಕೆ ಛೀಮಾರಿ ಹಾಕುವ ನಿಲುವಳಿಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ ದುರ್ಬಲರ ಪರವಾಗಿ ಇರಬೇಕಾದ ಸರ್ಕಾರ ಮಠ, ರಾಜಕೀಯದ ಪರವಾಗಿದೆ. ಸಂವಿಧಾನವನ್ನು ದಿಕ್ಕರಿಸುವ ರೀತಿ ಸರ್ಕಾರ ನಡೆಯುತ್ತಿದೆ. ಸ್ವಾಮೀಜಿ ಪರವಾಗಿ ವಿರೋಧ ಪಕ್ಷಗಳು ಬಾಯಿಗೆ ಬೀಗ ಹಾಕಿಕೊಂಡು ಕೂತಿವೆ. ಸೂಕ್ತ ತನಿಖೆ ನಡೆಯಬೇಕು. ಈ ವಿಚಾರಣೆಯನ್ನು ಹೊರ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಬಂಧನವಾದ ಕೆಲವೇ ಹೊತ್ತಿನಲ್ಲಿ ಎದೆ ನೋವು ಕಾಣಿಸಿಕೊಂಡಿರುವುದಕ್ಕೆ ಸರ್ಕಾರಿ ಖರ್ಚಿನಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಖಂಡಿಸುತ್ತೀವೆ. ಇದು ನಾಟಕ ಎಂದು ಗೊತ್ತಾದರೆ, ಖಂಡಿತವಾಗಿ ಈ ವಿಚಾರದಲ್ಲಿ ಜಾಮೀನು ಸಿಗದ ರೀತಿಯಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದು ಚಿಂತಕಿ ವಿಮಲಾ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು: ಐಸಿಯು ವಾರ್ಡ್‌ಗೆ ದಾಖಲು