ಬೆಂಗಳೂರು: ನ್ಯಾಯಾಲಯದ ನಿರ್ದೇಶನದಂತೆ ಕೋವಿಡ್ ಪರೀಕ್ಷಾ ವರದಿಯನ್ನು 24 ಗಂಟೆಗಳಲ್ಲಿ ಒದಗಿಸದ ಲ್ಯಾಬ್ ಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಖುದ್ದು ತಾವೇ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದು, 52 ಗಂಟೆಯಾದರೂ ವರದಿ ಸಿಕ್ಕಿಲ್ಲ. ನ್ಯಾಯಾಲಯ ಹಿಂದಿನ ವಿಚಾರಣೆ ವೇಳೆ 24 ತಾಸುಗಳಲ್ಲಿ ಪರೀಕ್ಷಾ ವರದಿ ನೀಡುವಂತೆ ನಿರ್ದೇಶಿಸಿದ್ದರೂ ಪಾಲನೆಯಾಗುತ್ತಿಲ್ಲ. ಗರ್ಭಿಣಿ ಮಹಿಳೆಯರು ಹಾಗೂ ವೃದ್ಧರು ಕೂಡ ತಪಾಸಣೆಗಾಗಿ ಆಸ್ಪತ್ರೆಗಳ ಎದುರು ಮೂರ್ನಾಲ್ಕು ಗಂಟೆ ಕಾಲ ಕ್ಯೂ ನಿಲ್ಲುತ್ತಿದ್ದಾರೆ. ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ವರದಿ ಇಲ್ಲದೇ ಗರ್ಭಿಣಿ ಮಹಿಳೆಯರನ್ನೂ ಆಸ್ಪತ್ರೆ ಒಳಗೆ ಬಿಡುತ್ತಿಲ್ಲ ಎಂದು ವಿವರಿಸಿದರು.
ಕೋವಿಡ್ ಪರೀಕ್ಷಾ ವರದಿ ತಡವಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಪೀಠ, ಕೋವಿಡ್ ಪರೀಕ್ಷಾ ಇಲ್ಲದಿದ್ದರೆ ಆಸ್ಪತ್ರೆಗಳು ದಾಖಲಿಸಿಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ಅವರ ಗತಿ ಏನು ಎಂದು ಪ್ರಶ್ನಿಸಿತು.
ಜತೆಗೆ 24 ತಾಸಿನ ಒಳಗೆ ಪರೀಕ್ಷಾ ವರದಿ ನೀಡದ ಲ್ಯಾಬ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲ ಆಸ್ಪತ್ರೆಗಳ ಎದುರು ಹೆಲ್ಪ್ ಡೆಸ್ಕ್ ಸ್ಥಾಪಿಸಬೇಕು. ವೃದ್ಧರು, ಗರ್ಭಿಣಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಹೋಮ್ ಐಸೋಲೇಷನ್ಗೆ ಆದ್ಯತೆ ನೀಡಬೇಕು. ಆಸ್ಪತ್ರೆಗಳಿಗೆ ತುರ್ತು ಸ್ಥಿತಿ ಇದ್ದರಷ್ಟೇ ದಾಖಲಿಸಿಕೊಳ್ಳಬೇಕು. ಆಕ್ಸಿಜೆನ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.
ಇನ್ನು ನರ್ಸಿಂಗ್ ಇನ್ಸಿಟ್ಯೂಟ್ ನ ಅಧ್ಯಕ್ಷ ಶಿವಕುಮಾರ್ ಎಂಬುವರು ಬರೆದಿರುವ ಪತ್ರದಲ್ಲಿ, ಆಸ್ಪತ್ರೆಗಳಲ್ಲಿ ರೆಮ್ಡೆಸಿವಿರ್ ಲಭ್ಯವಾಗುತ್ತಿಲ್ಲ. ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಬೆಡ್ ಹಾಗೂ ಆ್ಯಕ್ಸಿಜನ್ ಸಿಗುತ್ತಿಲ್ಲ ಎಂದಿದ್ದಾರೆ. ಇಂದು ಅತ್ಯಂತ ಗಂಭೀರ ವಿಚಾರ. ಆದ್ದರಿಂದ, ಜನರು ರೆಮ್ಡೆಸಿವರ್ ಲಸಿಕೆಗಾಗಿ ಅಲೆದಾಡುವುದು ಹಾಗೂ ಕಾಳಸಂತೆಯಲ್ಲಿ ಮಾರಾಟ ಆಗುವುದನ್ನು ತಪ್ಪಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಲಸಿಕೆ, ತಯಾರಕರು ಹಾಗೂ ಡೀಲರ್ ಗಳಿಂದ ನೇರವಾಗಿ ಆಸ್ಪತ್ರೆಗಳಿಗೆ ತಲುಪುವುದನ್ನು ಸರ್ಕಾರ ಮೇಲ್ವಿಚಾರಣೆ ಮಾಡಬೇಕು. ರೆಮ್ಡೆಸಿವಿರ್ ಲಭ್ಯ ಇರುವ ಔಷಧ ಅಂಗಡಿಗಳ ಮಾಹಿತಿಯನ್ನು ಫೋನ್ ನಂಬರ್ ಸಹಿತವಾಗಿ ಆನ್ ಲೈನ್ ನಲ್ಲಿ ಪ್ರತಿ 12ಗಂಟೆಗೊಮ್ಮೆ ಒದಗಿಸಬೇಕು. ಲಸಿಕೆ ಮಾರಾಟ ಮಾಡುವ ಅಂಗಡಿಗಳನ್ನು ಆಗ್ಗಾಗೆ ತಪಾಸಣೆಗೆ ಒಳಪಡಿಸಿ ಕಾಳಸಂತೆಯಲ್ಲಿ ಮಾರಾಟವಾಗಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿತು.
ಅಂತ್ಯ ಸಂಸ್ಕಾರಕ್ಕೆ ಜಾಗದ ಕೊರತೆ ಹಾಗೂ ಚಿತಾಗಾರಗಳ ಸಮಸ್ಯೆ ಪ್ರಸ್ತಾಪಿಸಿದ ಪೀಠ, ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಲು ಬೇಕಿರುವ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಬೆಡ್ಗಳ ಲಭ್ಯತೆ ಬಗ್ಗೆ ಮುಂದಿನ ವಿಚಾರಣೆ ವೇಳೆ ನಿಖರ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ನಾಳೆ ಸಂಜೆ 4.30ಕ್ಕೆ ಮುಂದೂಡಿತು. ಇದೇ ವೇಳೆ ರಾಜ್ಯದ ನ್ಯಾಯಾಲಯಗಳು ನೀಡಿರುವ ಮಧ್ಯಂತರ ಜಾಮೀನುಗಳ ಅವಧಿಯನ್ನು ಮೇ 29 ವರೆಗೆ ವಿಸ್ತರಿಸಿದ ಪೀಠ, ಜಾಮೀನು ರದ್ದುಗೊಳಿಸುವ ಅಗತ್ಯವಿದ್ದರೆ ಈ ಸಂಬಂಧ ನ್ಯಾಯಾಲಯದ ಎದುರು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿತು.