ಬೆಂಗಳೂರು: ಎರಡನೇ ಹಂತದ ಲಾಕೌಡೌನ್ ಮುಂದುವರೆದಿರುವ ಹಿನ್ನೆಲೆ ನಗರ ಪೊಲೀಸ್ ಆಯಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕರೆದಿದ್ರು. ಸಭೆಯಲ್ಲಿ ಎಲ್ಲಾ ವಲಯಗಳ ಡಿಸಿಪಿಗಳು ಭಾಗಿಯಾಗಿದ್ದು, ಲಾಕ್ಡೌನ್ ಬಗ್ಗೆ ಹೆಚ್ಚಿನ ಗಮನ ಕೊಡುವಂತೆ ಸೂಚನೆ ನೀಡಲಾಗಿದೆ.
ಸಿಲಿಕಾನ್ ಸಿಟಿಯಿಂದ ಜಿಲ್ಲೆ, ರಾಜ್ಯಗಳಿಗೆ ತೆರಳುವವರಿಗೆ ಯಾರೂ ಕೂಡ ಪಾಸ್ಗಳನ್ನ ನೀಡಬಾರದು. ಪಾಸ್ ನೀಡಲು ಸದ್ಯ ಜಿಲ್ಲೆ ಅಥವಾ ಅಂತರ್ ರಾಜ್ಯಗಳಿಗೆ ತೆರಳಲು ವೈರ್ಲೆಸ್ ಎಡಿಜಿಪಿ ನೇಮಕವಾಗಿದ್ದು, ಡಿಸಿಪಿ, ಎಸಿಪಿ, ಠಾಣಾ ಮಟ್ಟದಲ್ಲಿ ಪಾಸ್ ನೀಡುವ ಹಾಗಿಲ್ಲ. ಒಂದು ವೇಳೆ ನೀಡಿದ್ರೆ ಅಂತವರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಸದ್ಯ ಈಗಾಗಲೇ ಅಗತ್ಯ ಸೇವೆಗೆಂದು ಪಾಸ್ ಪಡೆದಿದ್ದು, ಕೆಲವರು ವಿನಾ ಕಾರಣ ಓಡಾಟ ಮಾಡ್ತಿದ್ದಾರೆ. ಹೀಗಾಗಿ ಸರ್ಕಾರಿ, ಅಗತ್ಯ ವಾಹನಗಳು ಸುಮ್ಮನೆ ಓಡಾಡೋದು ಕಂಡು ಬಂದ್ರೆ ವಾಹನ ಸೀಜ್ ಮಾಡಿ. ಪಾಸ್ ಪಡೆದವರು ಕೂಡ ಕೆಲಸ ನಿಮ್ಮಿತ್ತ ಓಡಾಡಬೇಕು. ಪಾಸ್ ಇದೆ ಎಂದು ಜಾಲಿ ರೈಡ್ಗೆ ಬಂದ್ರೆ ವಾಹನ ಜಪ್ತಿ ಮಾಡಿ. ಹಾಗೆಯೇ ಲಾಕ್ಡೌನ್ ದಿನಗಳು ಮುಗಿಯುವ ತನಕ ಶಿಸ್ತಿನಲ್ಲಿ ಕರ್ತವ್ಯನಿರ್ವಹಿಸಬೇಕು ಎಂದಿದ್ದಾರೆ.
ವಿಶೇಷವಾಗಿ ಬಡ ಕೂಲಿ ಕಾರ್ಮಿಕರ ಬಗ್ಗೆ ನಿಗಾ ಇಟ್ಟು ಯಾರಿಗೆ ಅಗತ್ಯ ವಸ್ತುಗಳು ಸಿಗುತ್ತಿಲ್ಲ, ಅಂತವರಿಗೆ ಸಹಾಯ ಮಾಡಿ. ಆಯಾ ವಿಭಾಗದ ಡಿಸಿಪಿಗಳು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾರೊಬ್ಬರಿಗೂ ಊಟ ಇಲ್ಲ ಅನ್ನೋ ಮಾತು ಕೇಳಿಬರಬಾರದು. ಸಂಕಷ್ಟದ ದಿನಗಳ ಸಮಯದಲ್ಲಿ ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆಯಲ್ಲಿ ಸೂಚನೆ ನೀಡಿದ್ದಾರೆ.