ಬೆಂಗಳೂರು: ಬಡ ವಿಧವೆಯರಿಗೆ ಮನೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಸರ್ಕಾರದಿಂದ ಭೂಮಿ ಪಡೆದು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿರುವ ಮಾತಾ ಅಮೃತಾನಂದಮಯಿ ಟ್ರಸ್ಟ್ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಿ ಎಂದು ಹೈಕೋರ್ಟ್, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಆದೇಶಿಸಿದೆ.
ನಗರದ ವರ್ತೂರು ಹೋಬಳಿ ಕಸವಹಳ್ಳಿಯ ಕವಿತಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಸರ್ಕಾರಿ ವಕೀಲರು ಸಲ್ಲಿಸಿದ ವರದಿ ಪರಿಶೀಲಿಸಿದ ಪೀಠ, ಬಡ ವಿಧವೆಯರಿಗೆ ಮನೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಕಸವಹಳ್ಳಿಯಲ್ಲಿ 22 ಎಕರೆ ಭೂಮಿ ಮಂಜೂರು ಮಾಡಿತ್ತು. ಆದರೆ, ಟ್ರಸ್ಟ್ ಆ ಸ್ಥಳದಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದೆ.
ಸರ್ಕಾರ ಭೂಮಿ ಮಂಜೂರು ಮಾಡಿದ ವೇಳೆ ವಿಧಿಸಿದ್ದ ಷರತ್ತು ಉಲ್ಲಂಘಿಸಿರುವ ಹಿನ್ನೆಲೆ ಮಾತಾ ಅಮೃತಾನಂದಮಯಿ ಟ್ರಸ್ಟ್ ವಿರುದ್ಧ ನಗರ ಜಿಲ್ಲಾಧಿಕಾರಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು.
ಕ್ರಮ ಜರುಗಿಸುವ ವೇಳೆ ಸಹಜ ನ್ಯಾಯ ಉಲ್ಲಂನೆಯಾಗದಂತೆ ಎಚ್ಚರ ವಹಿಸಬೇಕು. ಆದೇಶ ಪಾಲನೆ ಮಾಡಿದ ಕುರಿತು ಜೂನ್ 24ರಂದು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಆರೋಪ: ಬಡ ವಿಧವೆಯರಿಗೆ 2 ಸಾವಿರ ಮನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದೇವಸ್ಥಾನ, ಆಶ್ರಮ, ಅನಾಥ ಮಕ್ಕಳಿಗೆ ಶಾಲೆ, ಉಚಿತ ವೈದ್ಯಕಿಯ ಕೇಂದ್ರ ಸ್ಥಾಪಿಸುವುದಾಗಿ ಹೇಳಿ ಕಡಿಮೆ ಬೆಲೆಗೆ ಸರ್ಕಾರದಿಂದ 22 ಎಕರೆ ಜಮೀನನ್ನು 2000ರಲ್ಲಿ ಮಾತಾ ಅಮೃತಾನಂದಮಯಿ ಟ್ರಸ್ಟ್ ಮಂಜೂರು ಮಾಡಿಸಿಕೊಂಡಿತ್ತು.
ಆದರೆ, ಆ ಜಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಮೂಲಕ ಭೂ ಮಂಜೂರಾತಿ ಷರತ್ತು ಉಲ್ಲಂಘಿಸಿದೆ. ಆದ್ದರಿಂದ ಟ್ರಸ್ಟ್ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅಜಿರ್ದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.