ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ವಿಪತ್ತು ಘೋಷಣೆ ಸಂಬಂಧ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಿ: ಎಚ್.ಕೆ. ಪಾಟೀಲ್ - ಬೆಳಗಾವಿ ಸಂತ್ರಸ್ತರಿಗೆ ಪರಿಹಾರ

ವಿಧಾನಸಭೆಯಲ್ಲಿ ನೆರೆ ಪರಿಹಾರ ಸಂಬಂಧದ ಚರ್ಚೆ ನಡೆಯುವಾಗ ಮಾತನಾಡಿದ ಎಚ್​.ಕೆ. ಪಾಟೀಲ್​ ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಲು ನಿರ್ಣಯ ಕೈಗೊಳ್ಳಿ ಎಂದಿದ್ದಾರೆ.

ಎಚ್.ಕೆ. ಪಾಟೀಲ್

By

Published : Oct 11, 2019, 5:41 PM IST

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವ ಸಂಬಂಧ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ನೆರೆ ಪರಿಹಾರ ಸಂಬಂಧದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಾ,ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂಬುದು ನಮ್ಮ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಇಚ್ಛಾಶಕ್ತಿ ಸಾಕಾಗಲ್ಲ. ಹೀಗಾಗಿ ವಿಧಾಸಭೆಯಲ್ಲಿ ಈ ಸಂಬಂಧ ನಿರ್ಣಯ ಮಾಡಬೇಕು ಎಂದು ಆಗ್ರಹಿಸಿದರು.

ಇದರ ಜತೆಗೆ ನೆರೆ ಸಂಬಂಧ ಜಂಟಿ ಸದನ‌ ಸಮಿತಿ ರಚನೆ ಮಾಡಬೇಕು. ನೆರೆ ಪರಿಹಾರವಾಗಿ 25,000 ಕೋಟಿ ರೂಪಾಯಿ ಕೇಂದ್ರ ಸರ್ಕಾರ ಕೊಡದೇ ಹೋದರೆ, ಆ ಮೊತ್ತದ ಸಾಲ ಮಾಡಿ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ನೆರೆ ಪರಿಹಾರ ಸಂಬಂಧದ ಚರ್ಚೆ

ನೆರೆಯಿಂದ ಸುಮಾರು 2,000 ಸಾವಿರ ಶಾಲೆಗಳಿಗೆ ಹಾನಿಯಾಗಿವೆ. ಬೆಳಗಾವಿಯಲ್ಲಿ ನೆರೆ ಹಿನ್ನೆಲೆ ಎರಡು ತಿಂಗಳಲ್ಲಿ 35-61 ಶೈಕ್ಷಣಿಕ ದಿನ ವ್ಯರ್ಥವಾಗಿದೆ. ಅಲ್ಲಿನ ಮಕ್ಕಳಿಗೆ ಶಾಲೆನೇ ಇಲ್ಲದಂತಾಗಿದೆ. ಆ ಸಂಬಂಧ ಏನು ಕ್ರಮ‌ ಕೈಗೊಳ್ಳುತ್ತೀರಿ? ಪಠ್ಯ ಪುಸ್ತಕನೂ ನೀಡಿಲ್ಲ. ಈ ಬಗ್ಗೆ ಮಾನವೀಯತೆ ನಿಮಗೆ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.

ಬೆಳಗಾವಿ ಸಂತ್ರಸ್ತರಿಗೆ ಪರಿಹಾರ ಕಾಮಗಾರಿ ಸಂಬಂಧ ಆಕ್ರೋಶ ಇಲ್ಲವಾದರೆ ನೀವು ಬೆಳಗಾವೀಲಿ ಅಧಿವೇಶನ ಮಾಡುವ ಬದಲು ಬೆಂಗಳೂರಿಗೆ‌ ಏಕೆ ಓಡಿ ಬಂದಿರಿ? ಎಂದು ಕಿಡಿ ಕಾರಿದರು.

ನಾನು ಸಂತ್ರಸ್ತರ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಮಲಪ್ರಭೆಯ ಪ್ರವಾಹದ ಅಬ್ಬರ ಕಣ್ಣಾರೆ ಕಂಡಿದ್ದೇನೆ. ಭೀಮೆ, ಕೃಷ್ಣಾ, ಮಾರ್ಕಂಡೇಯ, ಬೆಣ್ಣಿಹಳ್ಳದಲ್ಲೂ ಪ್ರವಾಹ ಭೀಕರವಾಗಿತ್ತು. ಪ್ರವಾಹದಿಂದ ಆದ ನಷ್ಟ ಅಷ್ಟಿಷ್ಟಲ್ಲ ಎಂದು ವಿವರಿಸಿದರು.

ABOUT THE AUTHOR

...view details