ಬೆಂಗಳೂರು: ಬಿಎಂಟಿಸಿ ಡೀಸೆಲ್ ಬಸ್‌ಗಳನ್ನು ವಿದ್ಯುತ್‌ಚಾಲಿತ ವಾಹನಗಳನ್ನಾಗಿ ಪರಿವರ್ತಿಸಿ ಮರುಬಳಕೆಗೆ ಅಣಿಗೊಳಿಸಲು ತೈವಾನ್‌ನ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿವೆ. ಇದರಿಂದ ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಲಿದೆ. ಇದರ ಸಲುವಾಗಿ ಸಾರಿಗೆ ಇಲಾಖೆಯ ಜತೆ ಮಾತನಾಡುವುದರೊಂದಿಗೆ ಸಂಪರ್ಕ ಸೇತುವಾಗಿ ಕೆಲಸ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಹೂಡಿಕೆ ಮಾಡುವ ಸಂಬಂಧ ಇಂದು ರಾಜ್ಯಕ್ಕೆ ಭೇಟಿ ನೀಡಿರುವ ತೈವಾನ್ ಇಂಡಿಯಾ ಬಿಸ್ನೆಸ್ ಅಸೋಸಿಯೇಷನ್‌ನ (ಟಿಐಬಿಎ) 50ಕ್ಕೂ ಹೆಚ್ಚು ಹೂಡಿಕೆದಾರರ ಜೊತೆ ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು. ಸದ್ಯಕ್ಕೆ ನಮ್ಮಲ್ಲಿ ಕೇಂದ್ರ ಸರಕಾರದ ಸಹಯೋಗದೊಂದಿಗೆ ಇವಿ ಬಸ್‌ಗಳನ್ನು ಓಡಿಸುತ್ತಿದ್ದೇವೆ. ಆದರೆ ಡೀಸೆಲ್ ಬಸ್‌ಗಳನ್ನು ವಿದ್ಯುತ್‌ಚಾಲಿತ ವಾಹನಗಳನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕಿದೆ. ಇದು ಇವತ್ತಿನ ಅಗತ್ಯ ಕೂಡ ಎಂದು ಎಂದು ಹೇಳಿದರು.
ಇದನ್ನೂ ಓದಿ :ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಮೂವರು ಗಣ್ಯರಿಗೆ KSOU ಗೌರವ ಡಾಕ್ಟರೇಟ್
ಇದೇ ರೀತಿ ತುಮಕೂರು ಮಶೀನ್ ಟೂಲ್ಸ್ ಪಾರ್ಕ್ (ಟಿಎಂಟಿಪಿ) ಅನ್ನು ಪುನಶ್ಚೇತನಗೊಳಿಸುವ ಮೂಲಕ ಲಾಭದಾಯಕವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಹಾಗೆಯೇ ಎಲೆಕ್ಟ್ರಾನಿಕ್ಸ್ ಸಿಸ್ಟಂ ವಿನ್ಯಾಸ ಮತ್ತು ತಯಾರಿಕೆ (ಇಎಸ್‌ಡಿಎಂ) ಕಾರ್ಯ ಪರಿಸರವನ್ನು ವ್ಯಾಪಕಗೊಳಿಸುವ ಉದ್ದೇಶದಿಂದ ಮೈಸೂರಿನ ಕೋಚನಹಳ್ಳಿ ಮತ್ತು ಧಾರವಾಡದ ಕೋಟೂರು ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಇಎಂಸಿ 2.0 ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ತೈವಾನ್ ಕಂಪನಿಗಳ ಸಹಭಾಗಿತ್ವ ಹೊಂದುವ ಆಸಕ್ತಿ ಇದೆ ಎಂದು ತಿಳಿಸಿದರು.