ಆನೇಕಲ್ ಕರಗಕ್ಕೆ ಅನುಮತಿ ನೀಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸ್ಥಳೀಯರು ಆನೇಕಲ್: ಆನೇಕಲ್ನ ಪ್ರತಿಷ್ಠಿತ ಕರಗಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದ್ದು ಮೂರೂ ಬಣಗಳ ಅರ್ಜಿ ಪರಿಶೀಲಿಸಿದ ನಂತರ ತಹಶೀಲ್ದಾರ್ ಶಿವಪ್ಪ ಹೆಚ್ ಲಮಾಣಿ ಅವರು ಧರ್ಮರಾಯ ಸ್ವಾಮಿ ದೇವಾಲಯದ ಆವರಣದೊಳಗಡೆ ಕರಗ ರಹಿತ ಪೂಜಾ ವಿಧಿ-ವಿಧಾನಗಳಿಗೆ ಅವಕಾಶ ಕಲ್ಪಿಸಿ ಅಂತಿಮ ಆದೇಶ ಹೊರಡಿಸಿದ್ದಾರೆ.
ಧರ್ಮರಾಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಅರ್ಜುನಪ್ಪ ಹಾಗೂ ವಹ್ನಿಕುಲ ಸೇವಾ ಸಂಘದ ಚಂದ್ರಪ್ಪ ಕರಗ ಹೊರುವ ಜವಾಬ್ದಾರಿಗಾಗಿ ಅರ್ಜಿ ಸಲ್ಲಿಸಿದ್ದು, ಮೂಲ ವಹ್ನಿಕುಲ ಸಂಘದ ಅಧ್ಯಕ್ಷ ಪಿ ಮಂಜುನಾಥ್ರನ್ನೊಳಗೊಂಡಂತೆ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಹೈಕೋರ್ಟ್ ನೇರವಾಗಿ ಮುಜರಾಯಿ ಇಲಾಖೆಯ ಮುಖಾಂತರ ತಹಶೀಲ್ದಾರ್ ಅವರಿಗೆ ಅಂತಿಮ ನಿರ್ಣಯಕ್ಕೆ ಆದೇಶಿಸಿದ ಹಿನ್ನೆಲೆ ಕರಗದ ಬದಲು ಧರ್ಮರಾಯಸ್ವಾಮಿ ದೇವಾಲಯ ಅರ್ಚಕ ಅರ್ಜುನಪ್ಪ ದೇವಾಲಯದ ಆವರಣದಲ್ಲಿ ಪೂಜೆ ಮಾಡಿಕೊಳ್ಳಲು ಅಭ್ಯಂತರವಿಲ್ಲ ಎಂದಿದ್ದಾರೆ. ಜೊತೆಗೆ, ಅರ್ಜುನಪ್ಪನ ಮಗ ರಮೇಶ್ ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದು, ನಿನ್ನೆಯಿಂದ ಧರ್ಮರಾಯಸ್ವಾಮಿ ದ್ರೌಪತಾಂಭ ದೇವಾಲಯದ ಪೂಜೆಯಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ :ದೊಡ್ಡಬಳ್ಳಾಪುರದಲ್ಲಿ ಅಶಾಂತಿ ವಾತಾವರಣ: ಕರಗ ಮಹೋತ್ಸವ ರದ್ದು ಮಾಡಿದ ಗ್ರಾಮಸ್ಥರು
ಈ ಕುರಿತು ಮಾತನಾಡಿದ ಮೂಲ ವಹ್ನಿಕುಲ (ತಿಗಳರ) ಸೇವಾ ಸಂಘದ ಅಧ್ಯಕ್ಷ ಪಿ ಮಂಜುನಾಥ್, ಅರ್ಚಕರಿಗೆ ಕರಗ ಹೊರಲು ಅಧಿಕಾರಿಗಳು ಅನುಮತಿ ಮಾಡಿ ಕೊಡಬೇಕಿತ್ತು. ಕೇಂದ್ರ ಸಚಿವರೊಬ್ಬರ ಒತ್ತಡಕ್ಕೆ ಮಣಿದು ತಾಲೂಕು ಆಡಳಿತ ನಮಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
ಬಳಿಕ ವಹ್ನಿಕುಲ ಸಂಘದ ಸದಸ್ಯ ರಾಮಪ್ಪ ಮಾತನಾಡಿ, ಇದು ಪ್ರತಿಷ್ಠಿತ ಕರಗವಾಗಿದ್ದು, ವಹ್ನಿಕುಲ ಸಮುದಾಯ ಹಾಗೂ ಆನೇಕಲ್ ಕರಗಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ಮಾಯಸಂದ್ರ, ಅತ್ತಿಬೆಲೆಯಲ್ಲಿ ಕರಗಗಳು ನಡೆದಿವೆ. ಆದರೆ, ಅಧಿಕಾರಿಗಳು ಬಹುಸಂಖ್ಯೆಯಲ್ಲಿರುವ ವಹ್ನಿಕುಲ ಸಮಾಜದ ಕರಗ ನಡೆಯದಂತೆ ಆದೇಶಹೊರಡಿಸಿದ್ದಾರೆ ಎಂದರು.
ಇದನ್ನೂ ಓದಿ :ಆನೇಕಲ್ ಐತಿಹಾಸಿಕ ಕರಗ ಉತ್ಸವ ಆಚರಣೆ: ಇನ್ನೂ ಅಂತಿಮವಾಗದ ಕರಗ ಕುಣಿತ
ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅರ್ಚಕರಿಗೆ ಆದೇಶ.. ಇನ್ನುಳಿದಂತೆ ತಹಶೀಲ್ದಾರ್ ಪ್ರತಿಕ್ರಿಯಿಸಿ, ಮೂವರು ಅರ್ಜಿದಾರರ ಸಮ್ಮುಖದಲ್ಲಿ ಸಭೆಯಲ್ಲಿ ಅಧಿಕೃತ ಒಮ್ಮತ ಮೂಡಲಿಲ್ಲ. ಬದಲಾಗಿ, ತೀರ್ಪಿಗೂ ಮುನ್ನ ಕರಗದ ದೇವಾಲಯದ ಮುಂದೆ ಚಂದ್ರಪ್ಪನ ಕಡೆಯವರು ಬಲರಾಮ ಮೂರ್ತಿ ಸಿದ್ಧಗೊಳಿಸಿದ್ದು ಹಾಗೂ ಅದನ್ನು ಅರ್ಜುನಪ್ಪ ತಂಡ ಕೆಡವಿದ ಘಟನೆ ಇಂಟೆಲಿಜೆನ್ಸ್ ವರದಿಯಿಂದ ಗೊತ್ತಾಗಿದೆ. ಆದೇಶಕ್ಕೂ ಮುನ್ನ ಈ ಬೆಳವಣಿಗೆಗಳನ್ನು ಆಧರಿಸಿ ಹಾಗೂ ಈ ಹಿಂದಿನ ತಹಶೀಲ್ದಾರ್ ರಾಜೀವ್ ಕರೆದಿದ್ದ ಸಭೆಯಲ್ಲಿ ಮೂವರು ಅರ್ಜಿದಾರರಿಗೆ ನೀಡಿದ್ದ ಮೌಖಿಕ ಆದೇಶ ಹಾಗೂ ಎರಡನೆಯದಾಗಿ ನನ್ನ ನೇತೃತ್ವದಲ್ಲೂ ಇದೇ ತೀರ್ಮಾನವನ್ನು ತಿಳಿಸಲಾಗಿದೆ. ಇವೆಲ್ಲಾ ಬೆಳವಣಿಗೆಗಳನ್ನು ಪರಿಶೀಲಿಸಿ ಹೈಕೋರ್ಟ್ ಆದೇಶದನ್ವಯ ಮುಜರಾಯಿ ಆಯುಕ್ತರು ಕೊಟ್ಟ ನಿರ್ದೇಶನವನ್ನು ಗಮನಿಸಿ ದೇವಾಲಯದೊಳಗೆ ಸಂಪ್ರದಾಯದಂತೆ ಧರ್ಮರಾಯಸ್ವಾಮಿ ದ್ರೌಪತಾಂಭ ದೇವಾಲಯದಲ್ಲಿ ಪೂಜೆ ನಡೆಸಲು ಅರ್ಚಕರಿಗೆ ಆದೇಶ ನೀಡಿರುವುದಾಗಿ ತಿಳಿಸಿದರು.