ಬೆಂಗಳೂರು : ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಂಡಿರುವ ಭೂಗಳ್ಳರಿಗೆ ಬಿಸಿ ಮುಟ್ಟಿಸಿರುವ ಯಲಹಂಕ ತಹಶೀಲ್ದಾರ್ ಬರೋಬ್ಬರಿ 35 ಕೋಟಿ ರೂ. ಮೌಲ್ಯದ 16 ಎಕರೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗ್ಗೆ ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ನಗರದ ಏರ್‌ಪೋರ್ಟ್ ರಸ್ತೆ ಬಳಿಯಿರುವ ತಿಮ್ಮಸಂದ್ರ ಗ್ರಾಮದ ಸರ್ವೆ ನಂ. 19 ಹಾಗೂ 92 ರಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 16 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ತಾಲೂಕು ಆಡಳಿತ ತನ್ನ ಸುಪರ್ದಿಗೆ ಪಡೆಯಿತು.
ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತೆರವುಗೊಳಿಸಲು ಮುಂದಾದಾಗ ಜಾಗದಲ್ಲಿ ಡಾಬಾ ನಿರ್ಮಿಸಿಕೊಂಡಿದ್ದವರು ಅಡ್ಡಿಪಡಿಸಲು ಮುಂದಾದರು. ಇದನ್ನು ಲೆಕ್ಕಿಸದ ತಹಶೀಲ್ದಾರ್ ಒತ್ತುವರಿ ತೆರವುಗೊಳಿಸಿದರು.
35 ಕೋಟಿ ರೂ ಮೌಲ್ಯದ ಸರ್ಕಾರಿ ಭೂಮಿ ವಶ ಸರ್ಕಾರಿ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಡಾಬಾ ನಿರ್ಮಿಸಿಕೊಂಡು ಮೋಜು ಮಸ್ತಿ ಆರೋಪಿಗಳು ಬಳಸಿಕೊಂಡಿದ್ದರು. ಒತ್ತುವರಿದಾರರಿಗೆ ಎ.ಟಿ.ರಾಮಸ್ವಾಮಿ ವರದಿ ಅನ್ವಯ ನೋಟಿಸ್ ನೀಡಲಾಗಿತ್ತು. ಇಂದು ಅಕ್ರಮ ಭೂಮಿಯನ್ನು ತೆರವುಗೊಳಿಸಿ ವಶಕ್ಕೆ ಪಡೆದಿದ್ದೇವೆ. ಒತ್ತುವರಿದಾರರು 2016-17ರಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದೇವೆ ಎಂದು ತಹಶೀಲ್ದಾರ್ ಹೇಳಿದ್ದಾರೆ.
'ಒತ್ತಡಕ್ಕೆ ಮಣಿಯುವುದಿಲ್ಲ':
ಸರ್ಕಾರಿ ಭೂಮಿಯ ಅಕ್ರಮ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯುವುದು ನಮ್ಮ ಕರ್ತವ್ಯ. ಯಾವುದೇ ಅಡ್ಡಿ, ಆತಂಕಗಳು ಎದುರಾದರೂ ಹಿಂಜರಿಯುವುದಿಲ್ಲ. ಜೊತೆಗೆ ಯಾವುದೇ ಒತ್ತಡಕ್ಕೂ ಮಣಿಯದೆ ಪ್ರತಿವಾರ ಕಾರ್ಯಾಚರಣೆ ಮುಂದುವರೆಸುವುದಾಗಿ ತಹಶೀಲ್ದಾರ್ ರಘುಮೂರ್ತಿ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಉಪ ತಹಶೀಲ್ದಾರ್ ಮಹೇಶ್, ಕಂದಾಯ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿಗಳು, ಭೂಮಾಪಕ ಅಧಿಕಾರಿಗಳೂ ಪಾಲ್ಗೊಂಡಿದ್ದರು.