ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರಿಗೆ/ಕುಟುಂಬ ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್‌ಸಿ) ಸೇವೆಗಳನ್ನು ಸುಲಭವಾಗಿ ಒದಗಿಸಲು, ಕರ್ನಾಟಕ ರಾಜ್ಯ ಸರ್ಕಾರದ ಖಜಾನೆ ಆಯುಕ್ತರೊಂದಿಗೆ ಭಾರತೀಯ ಅಂಚೆ ಇಲಾಖೆ ಅಡಿ ಬರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಂಒಯುಗೆ ಸಹಿ ಹಾಕಿದೆ.
ತಿಳಿವಳಿಕೆ ಪತ್ರದ (ಎಂಒಯು) ಅಡಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನವೆಂಬರ್ 1 ರಿಂದ 30 ರವರೆಗಿನ ಮಸ್ಟರಿಂಗ್ ಅವಧಿಯಲ್ಲಿ 5.4 ಲಕ್ಷಕ್ಕೂ ಅಧಿಕ ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವೆಗಳನ್ನು ಒದಗಿಸುತ್ತದೆ.
ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣಪತ್ರ ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು, ಭಾರತೀಯ ಅಂಚೆ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ “ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್”, ಪಿಂಚಣಿದಾರರ ಮನೆ ಬಾಗಿಲಿನಲ್ಲಿ, ಡಿಜಿಟಲ್ ಲೈಫ್ ಪ್ರಮಾಣಪತ್ರ ಸಲ್ಲಿಸಲು ವ್ಯವಸ್ಥೆ ಮಾಡಿದೆ.
ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಕೆಲವೇ ನಿಮಿಷಗಳಲ್ಲಿ ಪೋಸ್ಟ್ ಮ್ಯಾನ್ ಮೂಲಕ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದು.