ಕರ್ನಾಟಕ

karnataka

ETV Bharat / state

ನಟ ಗಣೇಶ್ ಕಟ್ಟಡ ನಿರ್ಮಾಣ ಪ್ರಕರಣ; ಕಾನೂನು ಪ್ರಕಾರ ವ್ಯವಸ್ಥೆ ನಡೆಯಬೇಕೇ ವಿನಃ ಜನರ ಪ್ರತಿಭಟನೆ ಅನ್ವಯವಲ್ಲ: ಹೈಕೋರ್ಟ್

ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿನ ತಮ್ಮ ಜಮೀನಿನಲ್ಲಿ ಕಟ್ಟಡ ನಿರ್ಮಾಣದ ಕುರಿತು ನಟ ಗೋಲ್ಡನ್ ಸ್ಟಾರ್ ಗಣೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಂ.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

By ETV Bharat Karnataka Team

Published : Sep 14, 2023, 7:50 PM IST

Highcourt
ಹೈಕೋರ್ಟ್

ಬೆಂಗಳೂರು: ಕಾನೂನು ಮತ್ತು ಸಂವಿಧಾನದ ಅನ್ವಯ ವ್ಯವಸ್ಥೆ ನಡೆಯಬೇಕಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಾರೆ ಎಂದ ಕಾರಣ ಮೌನ ವಹಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಗೋಲ್ಡನ್ ಸ್ಟಾರ್ ಗಣೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ನ್ಯಾಯಮೂರ್ತಿ ಕೃಷ್ಣ ಎಂ.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ಸಂದರ್ಭದಲ್ಲಿ ಸರ್ಕಾರದ ವಕೀಲರು, ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿ ನಟ ಗಣೇಶ್ ಅವರ 1.24 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜನರು ಹಲವು ವಿಚಾರಗಳಿಗೆ ಆಕ್ಷೇಪಿಸುತ್ತಾರೆ. ಅದನ್ನು ಇಟ್ಟುಕೊಂಡು ನಾವು ಕೆಲಸ ಮಾಡಲಾಗುವುದಿಲ್ಲ. ಕಾನೂನಿನ ಅನ್ವಯ ನಾವು ನಡೆಯಬೇಕು. ಸಂವಿಧಾನದ ಅನ್ವಯ ನಡೆಯಬೇಕು. ಜನರ ಪ್ರತಿಭಟನೆಯ ಅನ್ವಯವಲ್ಲ. ಜನರು ಬೀದಿಯಲ್ಲಿ ಹಲವು ವಿಚಾರಗಳು ಹೇಳುತ್ತಾರೆ. ಅದನ್ನೆಲ್ಲ ಪರಿಗಣಿಸಲಾಗದು ಎಂದು ಪೀಠ ತಿಳಿಸಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು, ನ್ಯಾಯಾಲಯದ ಹಿಂದಿನ ಆದೇಶದಂತೆ ಅಡ್ವೋಕೇಟ್ ಜನರಲ್ ಅವರ ಮೂಲಕ ಸಂಬಂಧಿತ ಪ್ರಾಧಿಕಾರಕ್ಕೆ ಮನವಿ ಹಾಗೂ ಸುಪ್ರೀಂ ಕೋರ್ಟ್ ಆದೇಶ ಸಲ್ಲಿಸಲಾಗಿದೆ. ಇದರಲ್ಲಿನ ಕಾನೂನಿನ ವಿಚಾರವನ್ನು ಪರಿಶೀಲಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮಗೆ ಕಟ್ಟಡ ನಿರ್ಮಾಣ ಮಾಡಲು ಅನುಮತಿಸಲಾಗಿದೆ. ನೀವು ಏನು ಮಾಡಬೇಕೋ ಅದನ್ನು ಮಾಡಿ. ಸುಪ್ರೀಂ ಕೋರ್ಟ್​ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಡ್ವೋಕೇಟ್ ಜನರಲ್ ಅವರು ಸುಪ್ರೀಂ ಕೋರ್ಟ್ ಆದೇಶದಲ್ಲಿ ಏನಿದೆ ಎಂಬುದನ್ನು ಸಂಬಂಧಿತ ಪ್ರಾಧಿಕಾರಕ್ಕೆ ತಿಳಿಸಬೇಕು ಎಂದು ಪೀಠ ತಿಳಿಸಿತು.

ಈ ವೇಳೆ ಸರ್ಕಾರದ ಪರ ವಕೀಲರು, ಅರ್ಜಿದಾರರು ಅಡ್ವೋಕೇಟ್ ಜನರಲ್ ನೀಡಿರುವ ಮನವಿ ಸಂಬಂಧಿತ ಪ್ರಾಧಿಕಾರ ಪ್ರತಿನಿಧಿಸುವ ಪ್ರಾದೇಶಿಕ ಆಯುಕ್ತರಿಗೆ ಪರಿಗಣಿಸಲು ರವಾನಿಸಲಾಗಿದೆ ಎಂದು ಪೀಠಕ್ಕೆ ವಿವರಿಸಿದರು. ಇದಕ್ಕೆ ಪೀಠವು, ಸುಪ್ರೀಂ ಕೋರ್ಟ್ ಆದೇಶ ತುಂಬಾ ಕ್ಲಿಷ್ಟವಾಗಿದ್ದು, ಅದು ನಮಗೆ ತಿಳಿಯುವುದಿಲ್ಲ. ಅದನ್ನು ಅಧಿಕಾರಿಗಳಿಗೆ ಕಳುಹಿಸಿದರೆ ಅವರಿಗೆ ಹೇಗೆ ತಿಳಿಯುತ್ತದೆ. ಕಾನೂನಿನಲ್ಲಿ ಅವಕಾಶವಿದ್ದರೆ, ಜನರು ಆಕ್ಷೇಪಿಸುತ್ತಿದ್ದಾರೆ ಎಂದು ನೀವು ಕಟ್ಟಡ ನಿರ್ಮಾಣ ತಡೆಯಲಾಗದು ಎಂದು ಮೌಖಿಕವಾಗಿ ಹೇಳಿತು. ಅರ್ಜಿದಾರರ ಪರ ವಕೀಲರ ವಾದದಲ್ಲಿ ಹುರುಳಿದ್ದು, ರಾಜ್ಯ ಸರ್ಕಾರದಲ್ಲಿ ಅತ್ಯುನ್ನತ ಕಾನೂನು ಅಧಿಕಾರಿಯಾದ ಅಡ್ವೋಕೇಟ್ ಜನರಲ್ ಅವರು ಆಕ್ಷೇಪಾರ್ಹವಾದ ತೀರ್ಪುಗಳನ್ನು ಪರಿಶೀಲಿಸಬೇಕು. ಇದನ್ನು ಪಾಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಹೇಳಬೇಕು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ: ನಟ ಗಣೇಶ್‌ ಅವರಿಗೆ ಮನೆ ನಿರ್ಮಿಸಲು ಅವಕಾಶ ನೀಡಿದ ಹೈಕೋರ್ಟ್‌

ABOUT THE AUTHOR

...view details