ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಉತ್ತರ ಪತ್ರಿಕೆ ಹಗರಣ ವಿಚಾರ ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಹೆಚ್ಚು ಚರ್ಚಿತ ವಿಷಯವಾಗಿತ್ತು. ಕೋವಿಡ್ ಕಾರಣಕ್ಕೆ ಆನ್ ಲೈನ್ನಲ್ಲಿ ನಡೆಯುತ್ತಿದ್ದ ಸಭೆಯನ್ನು 6 ತಿಂಗಳ ಬಳಿಕ ಇಂದು ಆಫ್ಲೈನ್ನಲ್ಲಿ ನಡೆಸಲಾಯಿತು. ಬರೋಬ್ಬರಿ 60ಕ್ಕೂ ಹೆಚ್ಚು ಅಜೆಂಡಾಗಳನ್ನ ಇಟ್ಟುಕೊಂಡು ನಡೆದ ಸಭೆಯಲ್ಲಿ ಹೆಚ್ಚು ಚರ್ಚೆಗೆ ಒಳಗಾದ ವಿಷಯವಾಗಿದ್ದು ಉತ್ತರ ಪತ್ರಿಕೆಗಳ ಸ್ಕ್ಯಾಮ್ ಹಾಗೂ ವಿವಿಯ ಭೂ ಒತ್ತುವರಿ ವಿಚಾರ.
2020ರ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆದ ಪದವಿ ಪರೀಕ್ಷೆಗಳಲ್ಲಿ 804 ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿರುಚಿ ಮೋಸ ಮಾಡಲಾಗಿತ್ತು. ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡುವ ಗುತ್ತಿಗೆ ಪಡೆದಿದ್ದ ಟಿ.ಆರ್.ಎಸ್.ಫಾರಂ ಆ್ಯಂಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಈ ಕೃತ್ಯ ಜರುಗಿತ್ತು. ಮಹಾ ಮೋಸದ ವಿರುದ್ಧ ತನಿಖೆಗೆ ವಿವಿ ಕುಲಸಚಿವೆ ಕೆ.ಜ್ಯೋತಿ ಆಗ್ರಹಿಸಿ, ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ವಿವಿಯ ಕಂಪ್ಯೂಟರ್ ವಿಭಾಗದ ಪ್ರೋಗ್ರಾಮರ್ಸ್, ಶಿಕ್ಷಾಣಧಿಕಾರಿಗಳು, ಕೆಲ ವಿದ್ಯಾರ್ಥಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ದೂರು ಅವರು ದಾಖಲಿಸಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಂಡಿಕೇಟ್ ಸದಸ್ಯ ಪ್ರೇಮ್, ಇಂದಿನ ಸಭೆಯಲ್ಲಿ ಹೆಚ್ಚು ಚರ್ಚಿತ ವಿಷ್ಯವಾಗಿರುವುದು ಮಾರ್ಕ್ಸ್ ಕಾರ್ಡ್ ಸ್ಕ್ಯಾಮ್. 804 ಜನರ ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿದ್ದಲಾಗಿದೆ. ರಿಜಿಸ್ಟ್ರಾರ್ ಕೂಡಾ ಅಧಿಕೃತವಾಗಿ ದೂರು ನೀಡಿದ್ದಾರೆ. ಅದರ ತನಿಖೆಯಾಗಬೇಕು ಎಂದು ಚರ್ಚೆ ನಡೆಯುತ್ತಿದೆ. ಆದರೆ ಈ ಸಂಬಂಧ ಯಾವುದೇ ನಿರ್ಣಯಗಳನ್ನು ಕೈಗೊಂಡಿಲ್ಲ. ಇದರ ಈ ಹಿಂದೆ ಯಾರ ಕೈವಾಡ ಇದೆ ಎಂಬುದನ್ನ ತಿಳಿಯಲು ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಯಿತು ಎಂದು ತಿಳಿಸಿದರು.
200-300 ಎಕರೆ ಭೂ ಒತ್ತುವರಿ: ಟಾರ್ಸ್ಕ್ ಪೋರ್ಸ್ ನೇಮಕಕ್ಕೆ ಒತ್ತಾಯ
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 242 ಎಕರೆಯಷ್ಟು ಭೂಮಿ ಒತ್ತುವರಿಗೆಯಾಗಿರುವ ಸಂಬಂಧವೂ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಯಾಯಿತು. ವಿವಿಯ 1300 ಎಕರೆ ವಿಸ್ತರಣವೂ 200-300 ಎಕರೆ ಜಾಗ ಒತ್ತುವರಿಯಾಗಿದ್ದು, ಅದಕ್ಕೆ ಕಾಂಪೌಂಡ್ ಹಾಕಲು ತಕ್ಷಣಕ್ಕೆ ಬೇಕಿರುವ ಟಾರ್ಸ್ಕ್ ಪೋರ್ಸ್ ನೇಮಕ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ ಎಂದು ಸಿಂಡಿಕೇಟ್ ಸದಸ್ಯ ಪ್ರೇಮ್ ತಿಳಿಸಿದರು.