ಬೆಂಗಳೂರು: ಕೋವಿಡ್-19 ವೈರಸ್ ಹರಡದಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಅಪಾರ್ಟ್ಮೆಂಟ್ಗಳ ಈಜು ಕೊಳಗಳನ್ನು ತಕ್ಷಣವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ತಿಳಿಸಲಾಗಿದೆ.
ಈಜು ಕೊಳ ಮುಚ್ಚಲು ಬಿಬಿಎಂಪಿಯಿಂದ ಆದೇಶ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ, ಬಿಸಿಲಿನ ತಾಪಕ್ಕೆ ಈಜುಕೊಳಗಳ ಮೊರೆ ಹೋಗುವುದು ಸಹಜ. ಇದರಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈಜುಕೊಳ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿದೆ.
ಮದುವೆಗಳಿಗಿಲ್ಲ ಬ್ರೇಕ್: ಈಗಾಗಲೇ ನಿಗದಿಯಾದ ಮದುವೆ ಅಥವಾ ಸಮಾರಂಭಕ್ಕೆ ಯಾವುದೇ ಅಡ್ಡಿ ಇಲ್ಲ. ಆದೇಶಕ್ಕೂ ಮೊದಲೇ ನಿಗದಿಯಾದ ಸಮಾರಂಭಗಳನ್ನು ನಡೆಸಲು ಪಾಲಿಕೆ ಅನುಮತಿ ನೀಡಿದೆ. ಆದರೆ, ಸ್ವಚ್ಛತೆ ಜೊತೆಗೆ ನೂರು ಜನರಿಗಿಂತ ಹೆಚ್ಚು ಜನ ಸೇರಬಾರದು ಎಂದು ಸೂಚಿಸಿದೆ. ಜ್ವರ, ಕೆಮ್ಮು, ಶೀತ ಇರುವವರು ಕಾರ್ಯಕ್ರಮಗಳಿಗೆ ತೆರಳದಂತೆ ಮನವಿ ಮಾಡಿದ್ದಾರೆ.
ಇನ್ನೂ ಒಂದು ವಾರಗಳ ಕಾಲ ಸಾರ್ವಜನಿಕರು ಸಭೆ, ಸಮಾರಂಭ, ಮಾಲ್, ಸಿನಿಮಾಗಳಿಗೆ ಹೋಗದಂತೆ ಸರ್ಕಾರ ನಿಷೇಧ ಹೇರಿದೆ ಎಂದು ಆಯುಕ್ತ ಡಾ.ರವಿಕುಮಾರ್ ಸುರಪುರ್ ನೀಡಿದ್ದಾರೆ.