ಬೆಂಗಳೂರು : ಈ ಬಾರಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಸಸ್ಯಕಾಶಿ ಲಾಲ್ ಭಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಆಗಸ್ಟ್ 4 ರಿಂದ 15 ರವರೆಗೆ ನಡೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ಲಾಲ್ ಬಾಗ್‌ನ ಐತಿಹಾಸಿಕ ಬಂಡೆ ಹಿಂಭಾಗದಲ್ಲಿ ಪಶ್ಚಿಮ ಘಟ್ಟಗಳ ವಿಶೇಷ ಸಸ್ಯ ಪ್ರಭೇದಗಳನ್ನು ನೆಡುವ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು. ಬಳಿಕ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ 214ನೇ ಫಲ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ವಿಶೇಷವಾಗಿ ಕೆಂಗಲ್ ಹನುಮಂತಯ್ಯ ಅವರ ಹಿರಿಮೆ ಮತ್ತು ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿರುವ ಪ್ರದರ್ಶನವನ್ನು ಅಗಸ್ಟ್ 4 ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಲಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚು ವೀಕ್ಷಕರು ಆಗಮಿಸುವ ನಿರೀಕ್ಷೆ ಇದೆ ಎಂದರು.
4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್ ಹೂವಿನ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ವಿಶೇಷ ಆಕರ್ಷಣೆಯಾಗಿರಲಿದೆ. ಉಳಿದಂತೆ ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅವರು ನಿರ್ಮಿಸಿದ ವಿಧಾನಸೌಧದ ಮತ್ತು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಜನರನ್ನು ಆಕರ್ಷಿಸಲಿವೆ. ರೈಲ್ವೇ ಸಚಿವರಾಗಿ ಕೆಂಗಲ್ ಹನುಮಂತಯ್ಯನವರ ಕೊಡುಗೆಗಳನ್ನು ನೆನಪಿಸುವ ಸಲುವಾಗಿ ವರ್ಟಿಕಲ್ ಗಾರ್ಡನ್ ಪರಿಕಲ್ಪನೆಯಲ್ಲಿ ಪುಷ್ಪಗಳಿಂದ ಸಜ್ಜಾದ ರೈಲು ಕೂಡ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಹೇಗಿರಲಿದೆ ಗೊತ್ತಾ ಪ್ರತಿಮೆ? : ಲಕ್ಷಾಂತರ ಎಕ್ಸೋಟಿಕ್ ಆರ್ಕಿಡ್ಸ್, ಬರ್ಡ್ ಆಫ್ ಪ್ಯಾರಡೈಸ್ , ಬ್ರೋಮಿಲಿಯಾಡ್ಸ್, ಆಂಥೂರಿಯಂ, ಹತ್ತಾರು ಬಗೆಯ ವಾರ್ಷಿಕ ಹೂಗಳು ವಿವಿಧ ಪೊಲೀಸ್ ಜಾತಿಯ ಗಿಡಗಳನ್ನು ಬಳಸಿ ಇಂದು ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿ ಕೆಂಗಲ್ ಹನುಮಂತಯ್ಯ ನವರ ಪ್ರತಿಮೆ ಯನ್ನು ವಿನ್ಯಾಸ ಮಾಡಿದೆ. 18 ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯನ್ನು ಕಬ್ಬಿಣ ಮೆಷ್ ಮೊದಲಾದ ವಸ್ತುಗಳನ್ನು ಬಳಸಿ ಕೆಂಪು, ಪೀಚ್, ಹಳದಿ, ರಸ್ಟ್, ಆರೆಂಜ್ ಮತ್ತು ಶ್ವೇತ ವರ್ಣದ ಡಚ್ ಗುಲಾಬಿ ಹೂಗಳು, ಪಿಂಚ್ದ ಕೆಂಪು ಗುಲಾಬಿ, ಶ್ವೇತ ವರ್ಣದ ಸೇವಂತಿಗೆ ಹೂಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ.