ಬೆಂಗಳೂರು :ಸರ್ಕಾರಿ ಶಾಲೆಗಳಲ್ಲಿನ ಉತ್ತಮ ಆಡಳಿತ ವ್ಯವಸ್ಥೆ ಮತ್ತು ಶೈಕ್ಷಣಿಕ ನಿರ್ವಹಣೆಯಲ್ಲಿನ ವಿಶೇಷ ಸಾಧನೆ ಗುರುತಿಸಿ ಈ ವರ್ಷದಿಂದಲೇ ರಾಜ್ಯಮಟ್ಟದಲ್ಲಿ ‘ಸ್ವಾಭಿಮಾನಿ ಸರ್ಕಾರಿ ಶಾಲೆ’ ಎಂಬ ಪ್ರಶಸ್ತಿ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಹೇಳಿದ್ದಾರೆ.
ಕೊರೊನಾ ಸಾಮಾಜಿಕ ಸಂದರ್ಭದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣದ ಮೂಲಕ ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಇಂದು ರಾಜ್ಯದ ಸರ್ಕಾರಿ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಅಧ್ಯಕ್ಷರು/ಸದಸ್ಯರೊಂದಿಗೆ ನಡೆಸಿದ ವೆಬಿನಾರ್ ಸಂವಾದ ನಡೆಸಲಾಯಿತು. ಈ ವೇಳೆ ಮಾತಾನಾಡಿದ ಸಚಿವರು, ಶಾಲೆಯಲ್ಲಿರುವ ಮೂಲಸೌಲಭ್ಯಗಳು, ಶೈಕ್ಷಣಿಕ ಪ್ರಗತಿ, ಸಮುದಾಯದ ಸಹಭಾಗಿತ್ವ, ಶಾಲೆಗಳ ಸರ್ವಾಂಗೀಣ ಪ್ರಗತಿಯಲ್ಲಿ ಎಸ್‍ಡಿಎಂಸಿ-ಶಿಕ್ಷಕರ ಅನ್ಯೋನ್ಯ ಸಂಬಂಧಗಳು ಸೇರಿ ಹಲವು ಆಯಾಮಗಳಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಅಳೆದು ಈ ಸಾಲಿನಿಂದ ಪ್ರಗತಿಯಲ್ಲಿ ಅದ್ವಿತೀಯ ಸಾಧನೆ ಗುರುತಿಸಲಾಗುವುದು ಎಂದರು.