ಕರ್ನಾಟಕ

karnataka

ETV Bharat / state

ಕಾಲೇಜು ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರಿಂದ ದೂರು ದಾಖಲು - ಕೈಕಾಲು ಕಟ್ಟಿ ವಿವಸ್ತ್ರಗೊಳಿಸಿ ಭೀಕರ ಹತ್ಯೆ

ಮಗನನ್ನು ಕೊಲೆ ಮಾಡಲಾಗಿದೆ ಎಂದು ಮಾರ್ವೇಶ್​ ಪೋಷಕರು ಹೆಣ್ಣೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Suspicious death of college student
ಕಾಲೇಜು ವಿದ್ಯಾರ್ಥಿ ಅನುಮಾನಸ್ಪಾದ ಸಾವು

By

Published : Jul 26, 2023, 10:36 PM IST

ಬೆಂಗಳೂರು:‌ ಹೆಣ್ಣೂರಿನ ವಿನ್ಸೆಂಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮಾರ್ವೇಶ್ ಸಾವವನ್ನಪ್ಪಿದ‌ ವಿದ್ಯಾರ್ಥಿ.

ಎಂದಿನಂತೆ ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿ ಮಾರ್ವೇಶ್​ನನ್ನು ನಿನ್ನೆ ರಾತ್ರಿ ಜಿಹಾನ್​ ಆಸ್ಪತ್ರೆಗೆ ಸುನಿಲ್​ ಎಂಬಾತ ಚಿಕಿತ್ಸೆಗೆ ಎಂದು ಕರೆದುಕೊಂಡು ಬಂದಿದ್ದನು. ಆದರೆ, ಆತನನ್ನು ಪರೀಕ್ಷಿಸಿದ ವೈದ್ಯರು ಆಗಾಗಲೇ ಮಾರ್ವೇಶ್​ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮಾರ್ವೇಶ್​ ಮೃತಪಟ್ಟಿರುವುದನ್ನು ಖಚಿತಪಡಿಸಿದ ವೈದ್ಯರು ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಿದ್ದರು‌‌. ಅಷ್ಟೊತ್ತಿಗಾಗಲೇ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಪೊಲೀಸರು ಮಾರ್ವೇಶ್​ನನ್ನು ಆಸ್ಪತ್ರೆಗೆ ಸೇರಿಸಿದ್ದ ಸುನಿಲ್ ಎಂಬಾತನನ್ನು ವಿಚಾರಿಸಿದಾಗ ಯಾರೋ ಅಪರಿಚಿತರು ಲಿಂಗರಾಜಪುರ ಬಳಿ ಮಾರ್ವೇಶ್ ನನ್ನ ತನಗೆ ಒಪ್ಪಿಸಿದ್ದರು. ಹೀಗಾಗಿ ಆಸ್ಪತ್ರೆಗೆ ಸೇರಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

ಮತ್ತೊಂದೆಡೆ ವಿದ್ಯಾರ್ಥಿಯ ಪೋಷಕರು ನೀಡಿರುವ ದೂರಿನಲ್ಲಿ, ನಿನ್ನೆ ಎಂದಿನಂತೆ ಮಗ ಮಾರ್ವೇಶ್​ ಕಾಲೇಜಿಗೆ ಹೋಗಿದ್ದ, ಆದರೆ ಮನೆಗೆ ಹಿಂದಿರುಗಿರಲಿಲ್ಲ. ಮಗ ಮನೆಗೆ ಬಂದಿಲ್ಲ ಎಂದು ನಾವು ಆತಂಕದಲ್ಲಿದ್ದೆವು. ಇದೇ ವೇಳೆ, ಮಗನ ಸ್ನೇಹಿತನೊಬ್ಬ ಮನೆಗೆ ಬಂದು, ಮಾರ್ವೇಶ್​ ಬಂದಿಲ್ವ ಎಂದು ವಿಚಾರಿಸಿ ಹೋಗಿದ್ದನು. ನಿನ್ನೆ ಸಂಜೆ ಮನೆ ಬಳಿ ಮಾರ್ವೇಶ್ ಬಗ್ಗೆ ವಿಚಾರಿಸಿದ್ದ ವ್ಯಕ್ತಿ ಬಗ್ಗೆ ಅನುಮಾನವಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಗೊತ್ತಾಗಲಿದೆ ಎಂದು ಉಲ್ಲೇಖಿಸಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಠಾಣೆ ಪೊಲೀಸರು ಮಾರ್ವೇಶ್ ಸಾವಿಗೆ ಕಾರಣರಾದವರ ಪತ್ತೆಗೆ ಕ್ರಮ ಕೈಗೊಂಡಿರುವುದಾಗಿ ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಕೈಕಾಲು ಕಟ್ಟಿ ವಿವಸ್ತ್ರಗೊಳಿಸಿ ಭೀಕರ ಹತ್ಯೆ:ಕೈಕಾಲು ಕಟ್ಟಿ ವಿವಸ್ತ್ರಗೊಳಿಸಿ ಭೀಕರ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಯಾರಂಡಹಳ್ಳಿಯಲ್ಲಿ ನಡೆದಿದೆ. 40 ವರ್ಷದ ಆಸುಪಾಸಿನ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಅಂದಹಾಗೆ ಜನ ನಿಬಿಡ ಪ್ರದೇಶದ ಮಧ್ಯೆದಲ್ಲಿದ್ದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಇನ್ನು ರಸ್ತೆಯ ಪಕ್ಕದಲ್ಲಿಯೇ ಇರುವ ಪುಷ್ಪ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಬಿಲ್ಡಿಂಗ್ ಇದಾಗಿದ್ದು, ಕಳೆದ ಐದಾರು ದಿನಗಳ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ವ್ಯಕ್ತಿಯ ಮೈಮೇಲಿನ ಬಟ್ಟೆಯನ್ನು ವಿವಸ್ತ್ರಗೊಳಿಸಿ ಕೊಲೆಗೈಯಲಾಗಿದೆ. ಜನನಿಬಿಡ ಪ್ರದೇಶದಲ್ಲಿ ಬಿಲ್ಡಿಂಗ್ ಇದ್ದರೂ ಯಾರಿಗೂ ಗೊತ್ತಾಗದಂತೆ ಕೊಲೆ ಮಾಡಲಾಗಿದೆ. ಇಂದು ಸ್ಥಳೀಯರು ಗಮಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ನಡೆದ ಜಾಗದಲ್ಲಿ ಎಣ್ಣೆ ಪಾರ್ಟಿ ಮಾಡಲಾಗಿದ್ದು, ಮದ್ಯದ ಪ್ಯಾಕೆಟ್​ಗಳು ಬಿದ್ದಿವೆ. ಕೊಲೆ ಬಳಿಕ ಮೃತದೇಹದ ಮೇಲೆ ಚಾಪೆ ಹೊಂದಿಸಿ ಹಂತಕರು ಹೋಗಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ಘಟನಾ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಸೂರ್ಯನಗರ ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಪ್ರತಿಭಟನಾಕಾರರ ಮೇಲೆ ಪೊಲೀಸರ ಗುಂಡಿನ ದಾಳಿ, ಮೂವರು ಸಾವು: ಬಿಹಾರದಲ್ಲಿ ಉದ್ವಿಗ್ನ ಪರಿಸ್ಥಿತಿ

ABOUT THE AUTHOR

...view details