ಬೆಂಗಳೂರು: ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯ ಪ್ರಾಮಾಣಿಕತೆ ಕುರಿತು ಅನುಮಾನದ ನೆರಳು ಬಿದ್ದಲ್ಲಿ ಅದು ಅವರ ಪ್ರತಿಷ್ಠೆಗೆ ಧಕ್ಕೆ ತರುತ್ತದೆ. ಜತೆಗೆ, ಅವರಿರುವ ಇಡೀ ವ್ಯವಸ್ಥೆಯನ್ನು ಕಳಂಕಗೊಳಿಸಲು ಕಾರಣವಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ತನ್ನ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದ ಕ್ರಮ ಪ್ರಶ್ನಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಉಪಕಾರ್ಯದರ್ಶಿ-3 ಶ್ರೀರೂಪ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್‌ಗೌಡ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ಪಟ್ಟಿದೆ.
ಅಲ್ಲದೆ, ಸಾರ್ವಜನಿಕ ಸೇವಕರ ವಿರುದ್ಧ ತನಿಖಾಧಿಕಾರಿಯಿಂದ ವಿಚಾರಣೆ ನಡೆಸಿದಲ್ಲಿ ಅಂತಹ ಸಂಶಯವನ್ನು ತೊಡೆದು ಹಾಕಲು ನೆರವಾಗುತ್ತದೆ. ಜತೆಗೆ, ಅಂತಹ ಸಂಸ್ಥೆಯ ವಿರುದ್ಧ ಕೆಟ್ಟ ಅನುಮಾನವನ್ನು ಅಳಿಸಿ ಹಾಕಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್ 17 ಎ ಸರ್ಕಾರಿ ಅಧಿಕಾರಿಗಳನ್ನು ತನಿಖಾಧಿಕಾರಿಗಳು ವಿನಾಕಾರಣ ವಿಚಾರಣೆಗೆ ಒಳಪಡಿಸುವುದನ್ನು ತಡೆಯುವ ಒಂದು ಅಸ್ತ್ರವಾಗಿದೆ. ಅಧಿಕಾರಿಗಳ ವಿರುದ್ಧ ಆರೋಪ ಎದುರಾದಲ್ಲಿ ಈ ಕಾಯಿದೆಯಡಿ ಅನುಮತಿ ಕಡ್ಡಾಯವಾಗಿದೆ. ಆದರೆ, ಸೆಕ್ಷನ್ 19ರ ಅಡಿ ಅನುಮತಿ ನೀಡಿದರೆ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಈ ರೀತಿಯ ಅವಕಾಶ ಸಾಮಾನ್ಯ ಜನತೆಗೆ ಇರುವುದಿಲ್ಲ. ಆದರೆ, ಅರ್ಜಿದಾರರ ವಿರುದ್ಧದ ಆರೋಪದ ಕುರಿತು ಸತ್ಯಾಸತ್ಯತೆ ತಿಳಿಯುವುದಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
ಅಲ್ಲದೇ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಇನ್ನೂ ವಿಚಾರಣೆ ಮಾಡಬೇಕಾಗಿದೆ. ಅದಕ್ಕೂ ಮುನ್ನ ಅವರ ವಿರುದ್ಧ ದೋಷಾರೋಪ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕಾಗಿದ್ದು, ವಿಚಾರಣೆ ಮಾಡಬೇಕೇ ಬೇಡವೇ ಎನ್ನುವ ಕುರಿತು ಈ ಸಂದರ್ಭದಲ್ಲಿ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ. ಜತೆಗೆ, ಅರ್ಜಿದಾರರ ವಿರುದ್ಧ ವಿಚಾರಣೆ ನಡೆಸಿ ಆ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ ಎಂಬ ಅಂಶ ಗೊತ್ತಾದ ಸಂದರ್ಭದಲ್ಲಿ ಆರೋಪ ಕೈಬಿಡಬಹುದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.