ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಈ ವರ್ಷ ಹೆಚ್ಚು ಪೊಲೀಸರು ಸಸ್ಪೆಂಡ್: ಕಳೆದ 4 ವರ್ಷಗಳಲ್ಲೇ ಅಧಿಕ!

ಕಳೆದ ನಾಲ್ಕು ವರ್ಷಗಳಲ್ಲಿ‌ ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯ ಲೋಪದಡಿ ಒಟ್ಟು 1,688 ಪೊಲೀಸ್ ಅಧಿಕಾರಿಗಳು ಇಲಾಖಾ ವಿಚಾರಣೆ ಎದುರಿಸಿದ್ದಾರೆ. ಇದರಲ್ಲಿ 835 ಅಮಾನತುಗೊಂಡವರಾದರೆ, 68 ಮಂದಿ ಸೇವೆಯಿಂದಲೇ ವಜಾಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

Representative image
ಸಾಂದರ್ಭಿಕ ಚಿತ್ರ

By

Published : Nov 8, 2022, 7:27 AM IST

Updated : Nov 8, 2022, 10:48 AM IST

ಬೆಂಗಳೂರು: ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಅಮಾನತುಗೊಳ್ಳುತ್ತಿದ್ದು, ಈ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಕಳೆದ 9 ತಿಂಗಳಲ್ಲಿ ಅಧಿಕ ಮಂದಿ ಸಸ್ಪೆಂಡ್ ಆಗಿದ್ದಾರೆ. 2022 ಸೆಪ್ಟೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 235 ಪೊಲೀಸರು ಅಮಾನತಾಗಿದ್ದಾರೆ. 2019ರಲ್ಲಿ-122 ಮಂದಿ, 2020ರಲ್ಲಿ-159 ಮಂದಿ ಹಾಗೂ 2021ರಲ್ಲಿ-319 ಮಂದಿ ಪೊಲೀಸರು ಈ ಶಿಕ್ಷೆ ಅನುಭವಿಸಿದ್ದರು.

ಎಲ್ಲಾ ಇಲಾಖೆಯಂತೆ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದರೆ ವರ್ಷದಿಂದ ವರ್ಷಕ್ಕೆ ಅಧಿಕಾರದ ಪ್ರಭಾವ ಬಳಸಿ ಅಕ್ರಮ ಕೂಟದಲ್ಲಿ ಹೆಚ್ಚು ಪೊಲೀಸರು ಸಿಕ್ಕಿಹಾಕಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವ ದುರಾಸೆಗೆ ಬಿದ್ದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಪ್ರಮಾಣ ಜಾಸ್ತಿಯಾಗುತ್ತಿದೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಅನುಚಿತ ವರ್ತನೆ.. ಪೊಲೀಸ್​ ಇನ್ಸ್​ಪೆಕ್ಟರ್ ಸಸ್ಪೆಂಡ್

ಕಳೆದ ನಾಲ್ಕು ವರ್ಷಗಳಲ್ಲಿ‌ ಒಟ್ಟು ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯ ಲೋಪದಡಿ 1,688 ಪೊಲೀಸ್ ಅಧಿಕಾರಿಗಳು ಇಲಾಖಾ ವಿಚಾರಣೆ ಎದುರಿಸಿದ್ದಾರೆ. ಇದರಲ್ಲಿ 835 ಅಮಾನತುಗೊಂಡವರಾದರೆ, 68 ಮಂದಿ ವಜಾಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಅಂಕಿ-ಅಂಶಗಳು ಹೇಳುತ್ತವೆ.

ಇಲಾಖಾ ವಿಚಾರಣೆ, ಅಮಾನತು ಹೆಚ್ಚಳ: ವಿವಿಧ ಕಾರಣಗಳಿಂದಾಗಿ ವರ್ಷದಿಂದ ವರ್ಷಕ್ಕೆ ಅಮಾನತುಗೊಳ್ಳುವವರ ಸಂಖ್ಯೆ ಜತೆಗೆ ಇಲಾಖಾ ವಿಚಾರಣೆ ಎದುರಿಸಿದ ಪೊಲೀಸರ ಸಂಖ್ಯೆ ಕೂಡ ಅಧಿಕ.

2019ರಲ್ಲಿ-371, 2020ರಲ್ಲಿ-408, 2021ರಲ್ಲಿ-441 ಹಾಗೂ 2022ರ ಸೆಪ್ಟೆಂಬರ್ ತಿಂಗಳಿನಲ್ಲಿ 468 ಮಂದಿ ಇಲಾಖಾ ವಿಚಾರಣೆ ಎದುರಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಹೋಲಿಸಿದರೆ 9 ತಿಂಗಳಲ್ಲಿ ಅತಿಹೆಚ್ಚು ಅಂದರೆ 25 ಇನ್ಸ್​​ಪೆಕ್ಟರ್​​ಗಳು ಅಮಾನತುಗೊಂಡಿದ್ದಾರೆ. 2021ರಲ್ಲಿ 27 ಮಂದಿ ಇನ್ಸ್​​ಪೆಕ್ಟರ್​​ಗಳು ಅಮಾನತುಗೊಂಡಿದ್ದರು.

ಸಸ್ಪೆಂಡ್ ಹೆಚ್ಚಳಕ್ಕೆ ಕಾರಣವೇನು?: ಅನ್ಯಾಯಕ್ಕೊಳಗಾದ, ನೊಂದವರ ಪಾಲಿನ‌ ಆಶಾಕಿರಣವಾಗಬೇಕಿದ್ದ ಕೆಲ ಆರಕ್ಷಕರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್ ಇಲಾಖೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಪೋಸ್ಟಿಂಗ್​​ಗಾಗಿ ಹಣ ನೀಡುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಬೇಕಾದ ರಾಜಕಾರಣಿಗಳೇ ಧನಕ್ಕಾಗಿ ಕೈ ಚಾಚುತ್ತಿರುವುದರಿಂದ ಹಲವಾರು ಪೊಲೀಸರು ಅನಿವಾರ್ಯವಾಗಿ ಭ್ರಷ್ಟಕೂಪಗಳಲ್ಲಿ ಸಿಲುಕುವಂತಾಗಿದೆ.

ಇದನ್ನೂ ಓದಿ:ಬೆಟ್ಟಿಂಗ್ ಹೆಸರಲ್ಲಿ ಸುಲಿಗೆ: ಇಬ್ಬರು ಪಿಎಸ್ಐ ಸೇರಿ ಐವರು ಪೊಲೀಸರ ಅಮಾನತು

ಮತ್ತೊಂದೆಡೆ, ತಾನು ಮಾಡಬೇಕಾದ ಕೆಲಸ ಮರೆತು ಅಧಿಕಾರದ ಪ್ರಭಾವ ಬಳಸಿ ಅಕ್ರಮ ಕೃತ್ಯಗಳಿಗೆ ಕೆಲ ಪೊಲೀಸರು ಸಾಥ್ ನೀಡುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್, ಕ್ಲಬ್​​ಗಳಲ್ಲಿ ಇಸ್ಟೀಟ್ ಅನುಮತಿ‌ ನೀಡಿ ದಂಧೆಕೋರರಿಂದ ಹಣ‌ ಪಡೆದು ಕರ್ತವ್ಯ ಲೋಪ ಎಸಗುತ್ತಿದ್ದಾರೆ.‌ ಇತ್ತೀಚೆಗೆ ಸದಾಶಿವನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐವರು ಪೊಲೀಸರು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಳ್ಳಲು ಲಂಚ ಪಡೆದ ಅರೋಪದಡಿ‌ ಅಮಾನತುಗೊಂಡಿದ್ದರು.

ಕಾನೂನು ಕ್ರಮ ಕೈಗೊಳ್ಳಬೇಕು:ಅಧಿಕಾರವಿದಷ್ಟು ಕಾಲ ಬೇಗ ಹಣಮಾಡುವ ದೃಷ್ಟಿಯಿಂದ ಕಲ ಪೊಲೀಸರು ಅವ್ಯವಹಾರಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಿಂದೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಕೃತ್ಯಗಳಲ್ಲಿ ಶಾಮೀಲಾಗುತ್ತಿರುವುದು ಕಂಡು ಬರುತ್ತಿದೆ. ಪೊಲೀಸರೇ ಭಕ್ಷಕರಾದರೆ ಇಲಾಖೆ‌ ಮೇಲಿನ ನಂಬಿಕೆ ಕುಂದು ಉಂಟಾಗಲಿದ್ದು ಇದು ಅಪಾಯಕಾರಿಯಾಗಲಿದೆ. ಹೀಗಾಗಿ ತಪ್ಪಿತಸ್ಥರ ಮೇಲೆ ವಿಚಾರಣೆ ನಡೆಸಿ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

ರಾಜ್ಯಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಿಎಸ್ಐ‌ ಪರೀಕ್ಷಾ ನೇಮಕಾತಿಯಲ್ಲಿ ಅಕ್ರಮವೆಸಗಿದ್ದ‌ ಆರೋಪದಡಿ ಐಪಿಎಸ್ ಅಧಿಕಾರಿ ಅಮೃತ್​ ಪಾಲ್ ಸೇರಿದಂತೆ ಎಸಿಪಿ, ಇನ್ಸ್​​ಪೆಕ್ಟರ್ ಹಾಗೂ‌ ಪಿಎಸ್ಐ ಒಳಗೊಂಡಂತೆ 28 ಮಂದಿ ಪೊಲೀಸರು ಅಮಾನತುಗೊಂಡಿದ್ದರು. ಯುವತಿಯೊಂದಿಗೆ ಅನುಚಿತ ವರ್ತನೆ ಆರೋಪದಡಿ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯ‌ ಇನ್ಸ್​​ಪೆಕ್ಟರ್ ಅಮಾನತುಗೊಂಡಿದ್ದರು.

ಇದನ್ನೂ ಓದಿ:ಪಿಎಸ್​ಐ ಹಗರಣ : ಅಮೃತ್ ಪಾಲ್ ಡಬಲ್‌ ಝೀರೋ ಕೋಡ್ ವರ್ಡ್​ ಭೇದಿಸಿದ ಸಿಐಡಿ

Last Updated : Nov 8, 2022, 10:48 AM IST

ABOUT THE AUTHOR

...view details