ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಶಂಕಿತ ಆರೋಪಿಯ ಪತ್ನಿಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿದೆ.
ನಾಳೆ ಬೆಳಗ್ಗೆ 10.30ಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ನೀಡಿದೆ. ಶಂಕಿತನ ಮನೆ ಮೇಲೆ ದಾಳಿ ನಡೆಸಿದಾಗ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕುವ ಸಲುವಾಗಿ ಆತನ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಜಾಹೀರಾತು ಕಂಪನಿ ಮೇಲೆ ಎಸ್ಐಟಿ ದಾಳಿ :ಇನ್ನೊಂದಡೆ ಸಿಡಿಯಲ್ಲಿರುವ ವಿಡಿಯa ಹಾಗೂ ಫೋಟೋಗಳು ಎಡಿಟ್ ಆಗಿದೆ ಎನ್ನಲಾದ ಖಾಸಗಿ ಜಾಹೀರಾತು ಕಂಪನಿ ಮೇಲೆ ಎಸ್ಐಟಿ ದಾಳಿ ಮಾಡಿದೆ. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಕುಮಾರಕೃಪ ರಸ್ತೆಯ ಜಾಹೀರಾತು ಕಂಪನಿ ಮೇಲೆ ಎಸಿಪಿ ನಾಗರಾಜ್ ನೇತೃತ್ವದ ತಂಡ ದಾಳಿ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕುತ್ತಿದೆ.
ಸಿಡಿಯಲ್ಲಿರುವ ವಿಡಿಯೋ ದಾಳಿಯಾಗಿರುವ ಕಚೇರಿಯಲ್ಲಿಯೇ ನಡೆದಿದೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವಶಕ್ಕೆ ಪಡೆದಿರುವ ಚಿಕ್ಕಮಗಳೂರಿನ ಮೂಲದ ಶಂಕಿತ ವ್ಯಕ್ತಿ ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಮೂರು ತಿಂಗಳ ಹಿಂದೆ ಆರಂಭವಾಗಿದ್ದ ಟೈಂ ಕ್ರಿಯೇಟ್ ಆ್ಯಡ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಎಂದು ತಿಳಿದು ಬಂದಿದೆ.
ರೂಂ ಬುಕ್ ಮಾಡಲು ಯುವತಿಗೆ ಸ್ನೇಹಿತೆ ಸಹಾಯ :ಸಿಡಿಯಲ್ಲಿರುವ ಯುವತಿ ರೂಂ ಬುಕ್ ಮಾಡಲು ಸ್ನೇಹಿತೆಯನ್ನು ಬಳಸಿಕೊಂಡಿದ್ದ ವಿಚಾರ ವಿಚಾರಣೆ ವೇಳೆ ತಿಳಿದು ಬಂದಿದೆ. ಸಿಡಿ ಯುವತಿ ಹಾಗೂ ಬಾಯ್ ಫ್ರೆಂಡ್ ಜೊತೆ ಮಾ.2ರಂದು ಗೋವಾದಲ್ಲಿ ರೂಂ ಬುಕ್ ಮಾಡಲು ಪರಿಚಯಸ್ಥರ ಕಡೆಯಿಂದ ಹೇಳಿಸಿದ್ದಳು. ಇದರಂತೆ ಗೋವಾ ಮೂಲದ ಯುವತಿ ರೂಂ ಬುಕ್ ಮಾಡಿಕೊಟ್ಟಿದ್ದಳು. ಈ ಆಧಾರದ ಮೇಲೆ ಎಸ್‌ಐಟಿ ತಂಡ ಆಕೆಯ ವಿಚಾರಣೆ ನಡೆಸಿತ್ತು.
ನನಗೆ ಇದರ ಹಿಂದಿನ ಸತ್ಯ ಗೊತ್ತಿರಲಿಲ್ಲ. ಸ್ನೇಹಿತೆ ಎಂದು ರೂಂ ಮಾಡಿಕೊಟ್ಟಿದ್ದೆ ಅಷ್ಟೇ.. ಅದನ್ನು ಹೊರತುಪಡಿಸಿ ನನಗೇನು ಗೊತ್ತಿಲ್ಲ. ನೀವು ಮತ್ತೆ ಯಾವಾಗ ಕರೆದರೂ ಬರುತ್ತೇನೆ ಎಂದು ಸಿಡಿ ಯುವತಿ ಸ್ನೇಹಿತೆ ತಿಳಿಸಿದ್ದಾಳೆ ಎನ್ನಲಾಗಿದೆ. ರೂಂ ಬುಕ್ ಮಾಡಲು ಸಹಾಯ ಪಡೆದ ಸ್ನೇಹಿತೆಯನ್ನು ವಿಚಾರಣೆಗೊಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸಿಡಿ ಬಗ್ಗೆ ಗೊತ್ತಿಲ್ಲ ಎನ್ನುತ್ತಿರುವ ಶಂಕಿತರು :ವಿಚಾರಣೆಗೊಳಗಾಗಿರುವ ಶಂಕಿತರಿಗೆ ಸಿಡಿ ಬಗ್ಗೆ ಪ್ರಶ್ನಿಸಿದರೆ ಸಿಡಿ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಯುವತಿ ಪರಿಚಯವಿದೆ. ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಲಕ್ಷಾಂತರ ರೂ. ಪಡೆದ ಆರೋಪ ಎದುರಿಸುತ್ತಿರುವ ಶಂಕಿತ ಆರೋಪಿಗಳ ಬ್ಯಾಂಕ್ ಖಾತೆಗಳ ಸ್ಟೇಟ್‌ಮೆಂಟ್ ಬಗೆಗಿನ ಮಾಹಿತಿಯನ್ನು ನಾಳೆ ಎಸ್ಐಟಿ ಕಲೆ ಹಾಕುವ ಸಾಧ್ಯತೆಯಿದೆ.