ಕರ್ನಾಟಕ

karnataka

ETV Bharat / state

ಸಾಂವಿಧಾನಿಕ ಮೌಲ್ಯಗಳನ್ನು ಕಸಕ್ಕೆ ಸಮ ಎನ್ನುವಂತೆ ಕಾಂಗ್ರೆಸ್ ವರ್ತಿಸಿದೆ : ಹೆಚ್​ಡಿಕೆ ಟೀಕೆ - ಶಂಕಿತ ಭಯೋತ್ಪಾದಕ

ನಗರದಲ್ಲಿ ಪೊಲೀಸರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಇದಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ-ಮಾಜಿ ಸಿಎಂ ಹೆಚ್​ಡಿಕೆ

HD Kumaraswamy
ಮಾಜಿ ಸಿಎಂ ಹೆಚ್​ಡಿಕೆ

By

Published : Jul 19, 2023, 7:07 PM IST

Updated : Jul 19, 2023, 9:46 PM IST

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು:ವಿಧಾನಸಭೆಯಲ್ಲಿ ಪ್ರತಿಪಕ್ಷ ಶಾಸಕರನ್ನು ಕಲಾಪದಿಂದ ಅಮಾನತು ಮಾಡಿರುವ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ನಂತರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಮುಖ್ಯಮಂತ್ರಿಯ ಸನ್ನೆ ಮೇರೆಗೆ ಸ್ಪೀಕರ್ ಹುಡುಗಾಟಿಕೆ ಮಾಡಿದ್ದಾರೆ ಎಂದು ಹರಿಹಾಯ್ದರು.

ಪ್ರತಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟು, ಇವತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಹೊರಟಿದ್ದಾರೆ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ. ಸರ್ಕಾರದ ‌ನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೀಠದಲ್ಲಿ ದಲಿತರು ಕುಳಿತುಕೊಂಡಿದ್ದಾರೆ ಅನ್ನುವ ಕಾಂಗ್ರೆಸ್ ಆರೋಪದ ಬಗ್ಗೆ ಕೆಂಡಾಮಂಡಲರಾದ ಮಾಜಿ ಮುಖ್ಯಮಂತ್ರಿಗಳು, ಇದು ಕ್ಷುಲ್ಲಕ, ‌ಕೀಳು ಮಟ್ಟದ ಅಭಿರುಚಿ. ದಲಿತರ ಅನುಕುಂಪ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಆ ಪೀಠದಲ್ಲಿ ‌ಕುಳಿತಿರೋರು ಉಪ ಸಭಾಧ್ಯಕ್ಷರು. ಆ ವಿಷಯವನ್ನು ಕಾಂಗ್ರೆಸ್​ನವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಳೆದ ಎರಡು ದಿನಗಳ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮಹಾ ಘಟಬಂಧನ್ ಸಭೆಗೆ ಬಂದಿದ್ದ ಹೊರ ರಾಜ್ಯಗಳ ರಾಜಕಾರಣಿಗಳಿಗೆ ಶಿಷ್ಟಾಚಾರ ಬದಿಗೊತ್ತಿ, ರಾಜ್ಯದ ಘನತೆಯನ್ನು ಹತ್ತಿಕ್ಕಿ ಐಎಎಸ್ ಚಾಕರಿಗೆ ನಿಯೋಜಿಸಿದ್ದು ಸರಿಯಲ್ಲ. ರಾಜ್ಯ ಸರ್ಕಾರ ಅಧಿಕಾರ ದುರ್ಬಳಿಕೆ ಮಾಡಿಕೊಂಡಿದೆ. ಐಎಎಸ್ ಅಧಿಕಾರಿಗಳನ್ನು ರಾಜಕೀಯ ಸಭೆಗೆ ಬಳಸಿಕೊಂಡಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳನ್ನ ದುರ್ಬಳಕೆ ‌ಮಾಡಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸದನದಲ್ಲಿ ಇವತ್ತು ಈ ವಿಚಾರವಾಗಿ ಜೆಡಿಎಸ್, ಬಿಜೆಪಿ ಶಾಸಕರು ಸೇರಿ ಚರ್ಚೆ ನಡೆಸಲು ಮುಂದಾದೆವು. ಪ್ರತಿಷ್ಠೆಯಿಂದ ನಾವು ಮಾಡಿದ್ದೆ ಅನ್ನೋ ಸರಿ ಅಂತ ಕಾಂಗ್ರೆಸ್​‌ನವರು ನಡೆದುಕೊಂಡಿದ್ದಾರೆ. ಹಿಂದೆ ನಾವು ಅಧಿಕಾರದಲ್ಲಿ ಇದ್ದಾಗ ಯಾವುದೇ ರೀತಿಯ ಗಣ್ಯರಿಗೆ ಸೇವೆ ಮಾಡಲು ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. 2018ರಲ್ಲಿ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗಣ್ಯರನ್ನು ಸ್ವಾಗತಿಸಲು ಅಧಿಕಾರಿಗಳನ್ನು ಬಳಸಿಕೊಂಡಿಲ್ಲ ಎಂದು ತಿಳಿಸಿದರು.

ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಯಾವುದೇ ಶಿಷ್ಟ ಚಾರ ಉಲ್ಲಂಘನೆ ‌ಮಾಡಿಲ್ಲ. ಅಧಿಕಾರಿಗಳನ್ನು ಗುಲಾಮರಾನ್ನಾಗಿ ಮಾಡಿಕೊಂಡು ಅಧಿಕಾರಿಗಳನ್ನು ಯಾರ ಮನೆ ಬಾಗಿಲುಗೂ‌ ಕಳುಹಿಸಿಲ್ಲ. ಈ ಸರ್ಕಾರ ಸುಳ್ಳು ‌ಹೇಳಿದೆ. ವಿರೋಧ ಪಕ್ಷಗಳ ಬಲ್ಡೋಜ್ ಮಾಡಲು ಹೊರಟಿರೋದು ಸರ್ಕಾರದ ಉದ್ಧಟತನ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಬಿಜೆಪಿ ನಾವು ಸೇರಿ ಹೋರಾಟ ಮಾಡ್ತಾ ಇದ್ದೇವೆ ಎಂದು ಅವರು ಘೋಷಣೆ ಮಾಡಿದರು. ಕೆಲವು ಮಂತ್ರಿಗಳು ಶಾಸಕರನ್ನು ಹೆದರಿಸುವ ಕೆಲಸ ಮಾಡಿದ್ದಾರೆ. ನಿಮ್ಮನ್ನು ಮುಗಿಸುವುದಾಗಿ ಸದನದಲ್ಲಿ ಬೆದರಿಕೆ ಹಾಕಿದ್ದಾರೆ. ಇದು ಪ್ರಜಾಪ್ರಭುತ್ವವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಹಾದಿ ಬೀದಿಯಲ್ಲಿ ಕೊಲೆಗಳಾಗುತ್ತಿವೆ ಎಂದು ಆರೋಪಿಸಿದ ಹೆಚ್​ಡಿಕೆ:ರಾಜ್ಯದಲ್ಲಿ ಹಾದಿ ಬೀದಿಯಲ್ಲಿ ಕೊಲೆಗಳಾಗುತ್ತಿವೆ. ಇನ್ನು ಕಾನೂನು ಸುವ್ಯವಸ್ಥೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು 'ಅನಾಹುತ ಆಗುವ ಮುನ್ನವೇ ಶಂಕಿತ ಭಯೋತ್ಪಾದಕರನ್ನು ಬಂಧಿಸಿರುವ ನಮ್ಮ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ' ಎಂದರು.

ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು: ಸರ್ಕಾರ ಕೂಡ ಈ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕಾನೂನು ಸುವ್ಯವಸ್ಥೆ ಬಗ್ಗೆ ಬಹಳಷ್ಟು ಕಾಳಜಿ ವಹಿಸಬೇಕು. ಇತ್ತೀಚೆಗೆ ರಸ್ತೆಗಳಲ್ಲಿಯೇ ಕೊಲೆಗಳಾಗ್ತಿವೆ. ಜನರಿಗೆ ಆತಂಕ ಎದುರಾಗಿದೆ. ಕೂಡಲೇ ಸರ್ಕಾರ ಇಂತಹ ಘಟನೆಗಳು ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಬೇಕು. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಜನರು ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ನಗರದಲ್ಲಿ ಪೊಲೀಸರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಇದು ಸೂಕ್ಷ್ಮ ವಿಚಾರ. ಇತ್ತೀಚೆಗೆ ರಸ್ತೆಗಳಲ್ಲಿ ಕೊಲೆಗಳಾಗುತ್ತಿವೆ. ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ನಾನು ಹಗುರವಾಗಿ ಮಾತನಾಡುವುದಿಲ್ಲ:ಯುಪಿಎ ಮೈತ್ರಿಕೂಟಕ್ಕೆ ಹೊಸದಾಗಿ 'ಇಂಡಿಯಾ' ಎಂದು ನಾಮಕರಣ ಮಾಡಿರುವ ಬಗ್ಗೆ ನಾನು ಹಗುರವಾಗಿ ಮಾತನಾಡುವುದಿಲ್ಲ. ಹೆಸರು ಬದಲಾವಣೆ ಮಾಡಿಕೊಂಡಿರುವ ವಿಚಾರ ಅವರಿಗೆ ಸೇರಿದ್ದು. ಹೆಸರು ಇಟ್ಟ ಕೂಡಲೇ ನಾಡಿನ ಸಮಸ್ಯೆ ಬಗೆಹರಿಯುವುದಿಲ್ಲ. ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಮಾಡಿದ ಈ ಕಾರ್ಯಕ್ರಮದಿಂದ ಏನು ಸಂದೇಶ ನೀಡಿದ್ದಾರೆ?. ಕಾಂಗ್ರೆಸ್ ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ ಎಂದಷ್ಟೇ ಹೇಳಿದ್ದಾರೆ. ನೋಡೋಣ ಮುಂದೆ ಏನಾಗುತ್ತದೆ ಎಂದು. ನಾವು ಹೊಸ ಇಂಡಿಯಾ ಜೊತೆ ಅಥವಾ ಎನ್‌ಡಿಎ ಜತೆ ಹೋಗುವುದು 2ನೇ ವಿಚಾರ. ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯವೇ ಹೊರತು ಬೇರೆಯಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ರಾಜ್ಯವನ್ನು ಕಡೆಗಣಿಸಲಾಗುತ್ತಿದೆ: ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಎರಡೂ ಪಕ್ಷಗಳು ಮಾರಕ ಎಂಬುದು ನಾಡಿನ ಜನರಿಗೆ ಮನವರಿಕೆಯಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ರಾಜ್ಯದ ನೀರಾವರಿ ಯೋಜನೆ, ಅಭಿವೃದ್ಧಿ ಸಮರ್ಪಕವಾಗಿ ಆಗುವುದಿಲ್ಲ. ರಾಜ್ಯದಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತಿದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಆದರೂ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಬಿಜೆಪಿ ಅಥವಾ ಕಾಂಗ್ರೆಸ್ ಸರ್ಕಾರದಿಂದ ರಾಜ್ಯವನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದ ಪರವಾಗಿ ದನಿ ಎತ್ತಿ ಕೆಲಸ ಮಾಡುವ ಶಕ್ತಿ ಇರುವುದೇ ಜೆಡಿಎಸ್​ಗೆ ಎಂದು ಹೇಳಿದರು.

ಸದನದಲ್ಲಿ ಎಪಿಎಂಸಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನು ಬಿಜೆಪಿಗೆ ಬೆಂಬಲ ನೀಡಿದ್ದೇವೆ ಎನ್ನುವುದು ಸರಿಯಲ್ಲ. ಎಪಿಎಂಸಿ ಹೊರತುಪಡಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಲಾಭವಾಗಲಿದೆ ಎಂದು ಹೇಳುವ ವರ್ಗವೂ ಇದೆ. ನಾವು ಬಿಜೆಪಿ ಪರ ತೀರ್ಮಾನ ಕೈಗೊಂಡಿಲ್ಲ. ರೈತರ ಆಶಯದಂತೆ ಎಪಿಎಂಸಿ ವಿಧೇಯಕಕ್ಕೆ ವಿರೋಧ ಮಾಡಿದ್ದೇವೆ ಎಂದು ಹೆಚ್​ಡಿಕೆ ಸ್ಪಷ್ಟಪಡಿಸಿದರು. ಇನ್ನು ರಾಜ್ಯದ ನೀರಾವರಿ ಯೋಜನೆಗಳಾದ ಭದ್ರ, ಕೃಷ್ಣ ಮೇಲ್ದಂಡೆ, ಮೇಕೆದಾಟು ಯೋಜನೆ ಪರಿಸ್ಥಿತಿ ಏನಾಯ್ತು? ಇದೆಲ್ಲವೂ ಚರ್ಚೆಯಾಗಬೇಕಲ್ಲವೆ ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನಿಸಿದರು.

ಇದನ್ನೂ ಓದಿ:Suspected terrorist arrest: ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗುತ್ತಿದೆ.. ಮಾಜಿ ಸಿಎಂ ಬೊಮ್ಮಾಯಿ ಆತಂಕ

Last Updated : Jul 19, 2023, 9:46 PM IST

ABOUT THE AUTHOR

...view details