ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬಂಧನವಾದ ಐವರು ಶಂಕಿತ ಉಗ್ರರ ವಿಚಾರಣೆ ವೇಳೆ ಒಂದೊಂದೇ ಸ್ಫೋಟಕ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಶಂಕಿತರ ಬಳಿ ದೊರೆತ ಶಸ್ತ್ರಾಸ್ತ್ರ ಪೂರೈಸಿದ್ದ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿರುವ ಸಿಸಿಬಿ ಪೊಲೀಸರಿಗೆ ಆತ ಯಾರು ಎಂಬ ಕುರಿತು ಕೆಲ ಮಾಹಿತಿ ಲಭ್ಯವಾಗಿದೆ.
ಜುನೈದ್ ಸೂಚನೆಯಂತೆ ಕಾರಿನಲ್ಲಿ ತೆರಳಿದ್ದ ಶಂಕಿತ ಆರೋಪಿಗಳಾದ ಫೈಜಲ್ ರಬ್ಬಾನಿ ಮತ್ತು ಮುದಾಸೀರ್'ಗೆ ಶಸ್ತ್ರಾಸ್ತ್ರ ವರ್ಗಾವಣೆ ಜವಾಬ್ದಾರಿ ವಹಿಸಿದ್ದ ಆರೋಪಿ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಜೊತೆಯಾಗಿದ್ದ. ನಂತರ ಈ ಮೂವರೂ ನೆಲಮಂಗಲ ಸಮೀಪದ ಟಿ. ಬೇಗೂರು ಬಳಿ ತೆರಳಿದ್ದರು. ಅಲ್ಲಿ ಬ್ಯಾಗಿನಲ್ಲಿಟ್ಟು ಶಸ್ತ್ರಾಸ್ತ್ರ ವರ್ಗಾವಣೆ ಮಾಡಲಾಗಿದೆ. ಇತ್ತ ಶಸ್ತ್ರಾಸ್ತ್ರ ಪೂರೈಸಿದ್ದ ಆರೋಪಿಯ ಚಲನವಲನಗಳು ಹೆಬ್ಬಾಳದ ಖಾಸಗಿ ಆಸ್ಪತ್ರೆಯೊಂದರ ಬಳಿ ಇರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಆತ ಈ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದವನು ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಯಶವಂತಪುರ ರೈಲ್ವೇ ನಿಲ್ದಾಣದ ಸುತ್ತಮುತ್ತ ಮತ್ತು ನೆಲಮಂಗಲ ಬಳಿಯ ಟಿ. ಬೇಗೂರು ಸಮೀಪ ಸಿಸಿಬಿ ಪೊಲೀಸರ ತಂಡ ತೆರಳಿ ಪರಿಶೀಲನೆ ನಡೆಸಿದೆ.
ಇನ್ನು, ಐವರು ಶಂಕಿತ ಉಗ್ರರ ಪೊಲೀಸ್ ಕಸ್ಟಡಿ ಅವಧಿ ನಾಳೆಗೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿರುವ ಸಿಸಿಬಿ ಪೊಲೀಸರು, ಮತ್ತೆ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಾಸ್ಟರ್ ಮೈಂಡ್ ಜುನೈದ್ ಹಿಂದೆ ಸಿಸಿಬಿ :ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಜುನೈದ್ ಕುರಿತಂತೆ ಸಿಸಿಬಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. 2017ರಲ್ಲಿ ಆರ್‌ಟಿ ನಗರದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಭಾಗಿಯಾಗುವುದಕ್ಕೂ ಮುಂಚೆಯೇ ಪಾಸ್‌ಪೋರ್ಟ್ ಹೊಂದಿದ್ದ ಜುನೈದ್ ದುಬೈ ವೀಸಾ ಪಡೆದು, ಅದೇ ಪಾಸ್‌ಪೋರ್ಟ್ ಮೂಲಕ 2021ರಲ್ಲಿ ವಿದೇಶಕ್ಕೆ ಹಾರಿದ್ದಾನೆ. ಜುನೈದ್ ಭಾಗಿಯಾಗಿದ್ದ ಹತ್ಯೆಗೆ ಯಾವುದೇ ಅಂತಾರಾಷ್ಟ್ರೀಯ ಸಂಬಂಧವಿರಲಿಲ್ಲ. ಆದ್ದರಿಂದ ಪೊಲೀಸರು ಆತನ ಪಾಸ್‌ಪೋರ್ಟ್ ಜಪ್ತಿ ಮಾಡಿರಲಿಲ್ಲ. ನಂತರ ದುಬೈನಿಂದ ತೆರಳಿರುವ ಜುನೈದ್ ಮಧ್ಯ ಪ್ರಾಚ್ಯದ ಮೂಲಕ ತೆರಳಿ ಅಜೆರ್ಬೈಜಾನಿನ ರಾಜಧಾನಿ ಬಾಕುವಿನಲ್ಲಿದ್ದಾನೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ. ಸದ್ಯ ಇಂಟರ್ಪೋಲ್ ನೆರವಿನಿಂದ ಜುನೈದ್ ಪತ್ತೆ ಹಚ್ಚಲು ಸಿಸಿಬಿ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಸಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿರುವ ಜುನೈದ್ :ಬೆಂಗಳೂರಿನ ಹಲವೆಡೆವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ಧ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಮೊಹಮ್ಮದ್ ಜುನೈದ್ ಪತ್ತೆಗೆ ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿಯಾಗಿದೆ. 2021ರಲ್ಲಿ ರಕ್ತಚಂದನ ಸಾಗಣೆ ಪ್ರಕರಣದಡಿ ಜೈಲಿಗೆ ಹೋಗಿ ಬಂದಿದ್ದ ಜುನೈದ್, ಬೆಂಗಳೂರು ಬಿಟ್ಟು ವಿದೇಶದಲ್ಲಿ ಅಡಗಿಕೊಂಡಿದ್ದಾನೆ.
ಇದನ್ನೂ ಓದಿ :Suspected terrorists case: ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್ ವಶಕ್ಕೆ: ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾಹಿತಿ