ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರುನಗರದಲ್ಲಿ ಭಾರಿ ಸ್ಫೋಟ ಎಸಗಲು ದೊಡ್ಡ ಮಟ್ಟದಲ್ಲಿ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಇಂದು ಬೆಳಗ್ಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತುರ್ತು ಮಾಧ್ಯಮಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.
"ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಐವರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿಸಿಬಿ ಪೊಲೀಸರ ತಂಡ ಯಶಸ್ವಿಯಾಗಿದೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಶಂಕಿತರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಬಂಧಿತರಿಂದ ಏಳು ನಾಡ ಪಿಸ್ತೂಲ್, 45 ಜೀವಂತ ಗುಂಡುಗಳು, ವಾಕಿಟಾಕಿ ಸೇರಿದಂತೆ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಯಲ್ಲಿ ಐವರೂ ಸಹ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವುದಾಗಿ ಒಪ್ಪಿಕೊಂಡಿದ್ದಾರೆ." ಎಂದು ದಯಾನಂದ್ ತಿಳಿಸಿದ್ದಾರೆ.
15 ದಿನ ಪೊಲೀಸ್ ಕಸ್ಟಡಿಗೆ: "2008ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ರುವಾರಿ ಟಿ.ನಜೀರ್ ಹಾಗೂ 2017ರ ಕೊಲೆ ಪ್ರಕರಣದ ಆರೋಪಿ ಜುನೈದ್ ಇಬ್ಬರೂ ಸೇರಿ ಬಂಧಿತ ಸಯ್ಯದ್ ಸೋಹೆಲ್, ಮುದಾಸಿರ್, ಉಮರ್ ಮತ್ತು ಜಾಹಿದ್ಗೆ ತರಬೇತಿ ನೀಡಿದ್ದಾರೆ. ಸದ್ಯ ನಜೀರ್ ಜೈಲಿನಲ್ಲಿದ್ದಾನೆ. ಮತ್ತೋರ್ವ ಆರೋಪಿ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ದುಷ್ಕೃತ್ಯ ಎಸಗಲು ಶಂಕಿತರು ಏನೆಲ್ಲ ಪ್ಲಾನ್ ಮಾಡಿದ್ದರು ಎಂಬ ಬಗ್ಗೆ ತನಿಖೆ ಮಾಡಲಾಗುತ್ತದೆ. ಬಂಧಿತರನ್ನು 15 ದಿನ ಕಸ್ಟಡಿಗೆ ಪಡೆಯಲಾಗಿದೆ" ಎಂದರು.