ಬೆಂಗಳೂರು/ಕೋಲ್ಕತ್ತಾ:ಸಿಸಿಬಿ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಇಬ್ಬರು ಶಂಕಿತ ಉಗ್ರರ ಪೈಕಿ, ಮೊಹಮ್ಮದ್ ಅಲಿ ಮಂಡಲ್ ಜುಬಾ ಎಂಬಾತನ ಸಂಪರ್ಕದಲ್ಲಿದ್ದ ಶಂಕೆ ಮೇರೆಗೆ ಓರ್ವ ವ್ಯಕ್ತಿಯನ್ನ ಸಿಸಿಬಿ ಪೊಲೀಸರು ಕೋಲ್ಕತ್ತಾಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ನಿಷೇಧಿತ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಸೇಲಂ ನಿವಾಸಿ ಜುಬಾ ಜೊತೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಮೇರೆಗೆ ಕೋಲ್ಕತ್ತಾ ಮೂಲದ ಅಬು ಸೈಯದ್ಅನ್ನು ಪತ್ತೆ ಹಚ್ಚಿ, ಸಿಸಿಬಿ ವಿಚಾರಣೆ ನಡೆಸಿದೆ.
ಜುಬಾಗೆ ಮೊದಲಿನಿಂದ ಸೈಯದ್ ಪರಿಚಿತ ಆಗಿದ್ದ. ಜೊತೆಗೆ ಅಲ್ ಖೈದಾ ಉಗ್ರರು ಇದ್ದ ಟೆಲಿಗ್ರಾಮ್ ಗ್ರೂಪ್ನಲ್ಲಿ ಸದಸ್ಯನಾಗಿದ್ದ. ಗ್ರೂಪ್ನ ಎಲ್ಲಾ ಏಳು ಅಕೌಂಟ್ಗಳನ್ನು ಪರಿಶೀಲಿಸಿದಾಗ ನೇಮಕಾತಿ ಗ್ರೂಪ್ನಲ್ಲಿ ಸೈಯದ್ ಸದಸ್ಯನಾಗಿರುವುದು ಗೊತ್ತಾಗಿತ್ತು. ಈತನನ್ನು ನೇಮಕಾತಿ ಮಾಡಿಕೊಳ್ಳಲು ತಯಾರಿ ನಡೆಸಲಾಗಿತ್ತು. ಆದರೆ ಅಬು ಸೈಯದ್ಗೆ ವಿದ್ಯಾಭ್ಯಾಸ ಇಲ್ಲದ ಕಾರಣಕ್ಕೆ ತಡವಾಗಿತ್ತು.
ಇದನ್ನೂ ಓದಿ:ಬೆಂಗಳೂರಿಗರೇ ಹುಷಾರ್: ಫುಟ್ಪಾತ್ ಬ್ಲಾಕ್ ಮಾಡಿದ್ರೆ ಸಿಆರ್ಪಿಸಿ ಅಡಿ ಕೇಸ್
ಮುಂದಿನ ದಿನಗಳಲ್ಲಿ ಅಖ್ತರ್ ಹುಸೇನ್ ಹಾಗೂ ಅದಿಲ್ ಜುಬಾ ಬಳಿಕ ಅಬು ಸೈಯದ್ನನ್ನು ನೇಮಕಾತಿ ಮಾಡುವ ಪ್ಲಾನ್ ಅಗಿತ್ತು ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. ಈಗಾಗಲೇ ಅಖ್ತರ್ ಹುಸೇನ್ ಹಾಗೂ ಜುಬಾ ಇಬ್ಬರು ಉಗ್ರ ಸಂಘಟನೆಗೆ ನೇಮಕಾತಿ ಆಗಿದ್ದು, ಬಂಧನವಾಗುವ ಕೆಲವು ದಿನಗಳ ಹಿಂದೆ ಕಾಶ್ಮೀರಕ್ಕೆ ಹೋಗಲು ಸಿದ್ಧತೆ ನಡೆಸಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಮಾತನಾಡಿ, ಇಬ್ಬರು ಶಂಕಿತ ಉಗ್ರರನ್ನು ಆ.19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಂಕಿತರ ವಿಚಾರಕ್ಕೆ ಸಂಬಂಧಪಟ್ಟಂತೆ ಸೂಕ್ತ ಸಾಕ್ಷ್ಯವನ್ನು ಕಲೆ ಹಾಕಲಾಗುತ್ತಿದೆ. ಕೊಲ್ಕತ್ತಾದಲ್ಲಿ ಒಬ್ಬನ ವಿಚಾರಣೆ ಮಾಡಲಾಗಿದೆ. ಈತನ ಸಂಪರ್ಕದಲ್ಲಿ ಯಾರಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ. ಡಿಜಿಟಲ್ ಸಾಕ್ಷ್ಯವನ್ನು ಪರಿಶೀಲನೆ ಮಾಡಲಾಗುತ್ತಿದೆ. ಕೆಲವು ಡಿಜಿಟಲ್ ಸಾಕ್ಷ್ಯಗಳ ವರದಿ ಬರಬೇಕಾಗಿದ್ದು, ಅದಕ್ಕಾಗಿ ಕಾಯುತ್ತಿದ್ದೇವೆ. ನಿಷೇಧಿತ ಸಂಘಟನೆ ಸೇರಲು ಬಂಧನಕ್ಕೊಳಗಾದ ಇಬ್ಬರು ಶಂಕಿತರು ತಯಾರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.