ಬೆಂಗಳೂರು: ಹಾಡಹಗಲೇ ಇಬ್ಬರು ವಿದ್ಯಾರ್ಥಿಗಳನ್ನ ಕಿಡ್ನಾಪ್ ಮಾಡಲಾಗಿದೆ ಎಂಬ ಪ್ರಕರಣವನ್ನು ಕಾಮಾಕ್ಷಿಪಾಳ್ಯ ಪೊಲೀಸರು ಎರಡೇ ಗಂಟೆಗಳಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಕ್ಕಳು ಕಿಡ್ನಾಪ್ ಆದರೆಂದು ದೂರು ಕೊಟ್ಟ ತಂದೆ... ಎರಡೇ ತಾಸಲ್ಲಿ ಪೊಲೀಸರಿಗೆ ಗೊತ್ತಾಯ್ತು ಸತ್ಯ!
ಮಕ್ಕಳಿಬ್ಬರು ಶಾಲೆಗೆ ತೆರಳದೇ ಕಿಡ್ನಾಪ್ ಆಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಎರಡೇ ಗಂಟೆಗಳಲ್ಲಿ ಪ್ರಕರಣ ಭೇದಿಸಿದ್ದಾರೆ.
ಎರಡನೇ ತರಗತಿ ಓದುತ್ತಿರುವ ತರುಣ್ ಹಾಗೂ ರಮೇಶ್ ಸುಂಕದಕಟ್ಟೆ ಬಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಇಂದು ಬೆಳಗ್ಗೆ 8.30ಕ್ಕೆ ತರುಣ್ ಹಾಗೂ ರಮೇಶ್ರನ್ನು ಪೋಷಕರು ಶಾಲೆಗೆ ಕಳುಹಿಸಿದ್ದರು. ಆದರೆ ವಿದ್ಯಾರ್ಥಿಗಳು ಶಾಲೆಗೆ ಹೋಗಿರಲಿಲ್ಲ. ಹೀಗಾಗಿ ತಮ್ಮ ಮಕ್ಕಳು ಕಿಡ್ನಾಪ್ ಆಗಿದ್ದಾರೆನೋ ಎಂಬ ಅನುಮಾನದ ಮೇಲೆ ತಂದೆ ಸುಬ್ರಮಣ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು. ಪೊಲೀಸರು ತನಿಖೆಗೆ ಇಳಿದಾಗ ಪ್ರಕರಣ ಸತ್ಯತೆ ಬಯಲಾಗಿದ್ದು, ತರುಣ್ ಹಾಗೂ ರಮೇಶ್ ಬೆಳಗ್ಗೆ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದರು. ಆಗ ಕೋಪಗೊಂಡ ತಂದೆ ಸುಬ್ರಮಣ್ಯ ಹೊಡೆದಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಹೊರಟಿದ್ದರೂ ಕೂಡ ಅಲ್ಲಿಗೆ ಹೋಗದೆ ಅಜ್ಜಿಯ ಮನೆಯಲ್ಲಿ ಅಡಗಿ ಕುಳಿತಿದ್ದರು. ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.