ಬೆಂಗಳೂರು:ಕನ್ನಡದ ಖ್ಯಾತ ಸಾಹಿತಿಯು.ಆರ್.ಅನಂತಮೂರ್ತಿ ಅವರ ಕೃತಿಗಳನ್ನು ತಮಿಳಿಗೆ ಭಾಷಾಂತರಿಸುತ್ತಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಜಿ.ನಂಜುಂಡನ್ ಅವರು ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಕೆಂಗೇರಿ ಬಳಿಯ ನಾಗದೇವನಹಳ್ಳಿಯಲ್ಲಿರುವ ನಿವಾಸದಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಕಳೆದ 4 ದಿನಗಳಿಂದ ವಿವಿಗೆ ಬಾರದ ಕಾರಣ ವಿಭಾಗದ ಸಹಾಯಕರೊಬ್ಬರು ನಂಜುಂಡನ್ ಮನೆಗೆ ತೆರಳಿದ್ದಾರೆ. ಈ ವೇಳೆಯೂ ಮನೆ ಬಾಗಿಲು ತೆಗೆದಿರಲಿಲ್ಲ. ನಂತರ ತಮಿಳುನಾಡಿನ ಅವರ ಪತ್ನಿಗೆ ಮಾಹಿತಿ ರವಾನಿಸಿದ್ದು ಆಕೆ ನಿವಾಸಕ್ಕೆ ಬಂದು ಕರೆದಾಗಲೂ ಬಾಗಿಲು ತೆರೆಯದಿದ್ದಾಗ ಆತಂಕಗೊಂಡು ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆ ಬಾಗಿಲು ತೆಗಿಸಿದಾಗ ಕೊಳೆತ ಸ್ಥಿತಿಯಲ್ಲಿ ನಂಜುಂಡನ್ ಶವ ಪತ್ತೆಯಾಗಿದೆ.