ಬೆಂಗಳೂರು :ನಗರದಲ್ಲಿರುವ ಅನಧಿಕೃತ ಬಹುಮಹಡಿ ಕಟ್ಟಡಗಳ (ಹೈ ರೈಜ್ ಕಟ್ಟಡ) ಸರ್ವೇ ಸದ್ಯಕ್ಕೆ ಮಾಡುತ್ತಿಲ್ಲ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸರ್ವೇ ಅಗತ್ಯವಿದೆ. ಅದನ್ನಷ್ಟೇ ಮಾಡುತ್ತಿದ್ದೇವೆ. ಉಳಿದಂತೆ ಹೈರಸ್ ಬಿಲ್ಡಿಂಗ್ ಬಗ್ಗೆ ಸದ್ಯಕ್ಕೆ ಗಮನ ಕೊಡುತ್ತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಅಂದಾಜು 5 ಸಾವಿರ ಹೈರೈಸ್ ಅನಧಿಕೃತ ಕಟ್ಟಡಗಳು ಇವೆ. ನಾಲ್ಕು ಅಂತಸ್ತಿಗಿಂತ ಹೆಚ್ಚು ಮಹಡಿಗಳಿರುವ ಕಟ್ಟಡ ಹೈರೈಸ್ ವ್ಯಾಪ್ತಿಗೆ ಬರಲಿವೆ. ಕಳೆದ ಹತ್ತು ವರ್ಷದಲ್ಲಿ ಬಿಬಿಎಂಪಿಯಿಂದ ಅಧಿಕೃತವಾಗಿ 1,178 ಹೈರೈಸ್ ಕಟ್ಟಡಗಳು ಅನುಮತಿ ಪಡೆದಿದ್ದು, ನಿರಾಕ್ಷೇಪಣಾ ಪ್ರಮಾಣ ಪತ್ರವನ್ನೂ ಪಡೆದಿವೆ.
ಆದರೆ, ಅಂದಾಜು ಐದು ಸಾವಿರ ಹೈರೈಸ್ ಕಟ್ಟಡಗಳು ಅನಧಿಕೃತವಾಗಿ ನಿರ್ಮಾಣವಾಗಿವೆ. ಬಿಬಿಎಂಪಿ ಇವುಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿರುವುದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಸದ್ಯ ಹೈರೈಸ್ ಕಟ್ಟಡಗಳ ಬದಲು, ಶಿಥಿಲಾವಸ್ಥೆ ಕಟ್ಟಡದ ಬಗ್ಗೆ ಮಾತ್ರ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ ಎಂದರು.