ಬೆಂಗಳೂರು :ಗ್ರಾಮಗಳಲ್ಲಿ ಆಸ್ತಿ ತೆರಿಗೆ ಪಾವತಿಯಿಂದ ಕೆಲ ಪ್ರಭಾವಿಗಳು ತಪ್ಪಿಸಿಕೊಂಡಿದ್ದಾರೆ. ಅಂತಹವರನ್ನ ಪತ್ತೆ ಮಾಡಿ ಅವರಿಂದ ತೆರಿಗೆ ಪಾವತಿ ಮಾಡಿಸಿಕೊಳ್ಳಲಾಗುತ್ತದೆ. ಇನ್ನಾರು ತಿಂಗಳಿನಲ್ಲಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ಕಡೆ ಗ್ರಾಮ ಪಂಚಾಯತ್‌ಗೆ ತೆರಿಗೆ ಕಟ್ಟುವುದರಿಂದ ಕೆಲ ಪ್ರಭಾವಿಗಳು ತಪ್ಪಿಸಿಕೊಂಡಿದ್ದಾರೆ. ಈ ಕುರಿತು ನಮ್ಮ ಗಮನಕ್ಕೆ ಬಂದಿದೆ.
ಸ್ವಾಮಿತ್ವ ಬಂದ ಕೂಡಲೇ ಇಡೀ ರಾಜ್ಯದಲ್ಲಿ ಯಾವ ಯಾವ ಗ್ರಾಮ ಪಂಚಾಯತ್‌ನಲ್ಲಿ ತೆರಿಗೆ ಕಟ್ಟುವುದರಿಂದ ಯಾರೆಲ್ಲಾ ತಪ್ಪಿಸಿಕೊಂಡಿದ್ದಾರೆ ಅದನ್ನು ಸಮೀಕ್ಷೆ ನಡೆಸಲಿದ್ದೇವೆ. ಮೂರರಿಂದ ಆರು ತಿಂಗಳಿನಲ್ಲಿ ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚುವರಿ ತೆರಿಗೆ ಬರುವಂತೆ ಮಾಡಲಿದ್ದೇವೆ ಎಂದರು.
ಗ್ರಾಮಗಳಲ್ಲಿ ಆಸ್ತಿ ತೆರಿಗೆ ಪಾವತಿಸದ ಪ್ರಭಾವಿಗಳ ಪತ್ತೆಗೆ ಸಮೀಕ್ಷೆ : ಸಚಿವ ಕೆ ಎಸ್ ಈಶ್ವರಪ್ಪ ಬಹಳ ಬುದ್ಧಿವಂತಿಕೆಯಿಂದ ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಂಡಿದ್ದಾರೆ. ಅಧಿಕಾರಿಗಳು ಕೂಡ ಅದರಲ್ಲಿ ಇದ್ದಾರೆ. ಅನೇಕ ಕಡೆ ಅಧಿಕಾರಿಗಳು ನಡೆಸುತ್ತಿರುವ ಆಡಳಿತ ಎಲ್ಲರಿಗೂ ಗೊತ್ತಿದೆ. ಅಧಿಕಾರಿಗಳು ಇದರಲ್ಲಿ ಇದ್ದಾರೆ.
ಸ್ವಾಮಿತ್ವ ಮೂಲಕ ಇದರ ಸಮೀಕ್ಷೆ ನಡೆಸಿ ಗ್ರಾಮ ಪಂಚಾಯತ್ ಆದಾಯವನ್ನು ನಾವು ಹೆಚ್ಚು ಮಾಡಲಿದ್ದೇವೆ. 3-6 ತಿಂಗಳ ಈ ಸಮಯ ತೆಗೆದುಕೊಂಡು ಇದನ್ನೆಲ್ಲಾ ಪೂರ್ಣಗೊಳಿಸಲಿದ್ದೇವೆ ಎಂದರು. ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಆಸ್ತಿ ಖಾತೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಅವುಗಳ ಮಾಹಿತಿ ಪಂಚತಂತ್ರ ಸಾಫ್ಟ್ವೇರ್ನಲ್ಲಿ ಬರುತ್ತದೆ. ಆದರೂ ಕೆಲ ಆಸ್ತಿಗಳು ಮಾತ್ರ ಗ್ರಾಮದಿಂದ ಹೊರಗೆ ಇರುತ್ತವೆ. ಅಂತಹ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದಿಲ್ಲ, ಅವುಗಳ ಸಮೀಕ್ಷೆಯನ್ನು ನಡೆಸಬೇಕು.
ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ತರಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಸ್ವಾಮಿತ್ವ ಯೋಜನೆಯಡಿ ಡ್ರೋನ್ ಮೂಲಕ ಸರ್ವೆ ನಡೆಸಿ ಮ್ಯಾಪ್ಗಳನ್ನು ಕೊಡಲಿದ್ದಾರೆ. ಅದರ ಆಧಾರದಲ್ಲಿ ನಾವು ಗುರಿ ಸಾಧಿಸಲಿದ್ದೇವೆ ಎಂದರು. ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಮುಗಿದಿದೆ. ಇದೀಗ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ತರಬೇತಿ ಕೊಡಲು ರಾಜ್ಯದಲ್ಲಿ 245 ಕೇಂದ್ರ ಮಾಡಿದ್ದೇವೆ. 900 ಜನ ಸಂಪನ್ಮೂಲ ವ್ಯಕ್ತಿಗಳನ್ನು ಇದಕ್ಕಾಗಿ ನಿಯೋಜಿಸಿದ್ದೇವೆ.
ಜನವರಿ 19ರಿಂದ ತರಬೇತಿ ಆರಂಭವಾಗಲಿದೆ. 40 ಜನರ ಒಂದು ಬ್ಯಾಚ್‌ನಂತೆ ಒಟ್ಟು 5 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಅವರ ಖರ್ಚುವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದರು. ಇದಕ್ಕಾಗಿ 27 ಕೋಟಿ ವೆಚ್ಚವಾಗಲಿದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ವೆಚ್ಚ ಮಾಡಲಾಗುತ್ತದೆ. ಈ ಬಾರಿ ಯಾರ್ಯಾರು ಗೆದ್ದಿದ್ದರೋ ಅವರೆಲ್ಲರಿಗೂ ತರಬೇತಿಯನ್ನು ನೀಡಲಾಗುತ್ತದೆ. ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾದ ನಂತರ ಅವರಿಗೆ ಯಾವ ರೀತಿ ತರಬೇತಿ ಕೊಡಬೇಕು ಎಂದು ನಿರ್ಧರಿಸಲಾಗುತ್ತದೆ ಎಂದರು.
ಶುದ್ಧ ಕುಡಿಯುವ ನೀರಿನ ಘಟಕ ಅವ್ಯವಹಾರ ಸದನ ಸಮಿತಿಗೆ :ರಾಜ್ಯದಲ್ಲಿ ಸದ್ಯ 17,000 ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿವೆ. ಆದರೂ ಕೂಡ ಪ್ರಗತಿಪರಿಶೀಲನಾ ಸಭೆ ವೇಳೆ ಕೆಲ ಘಟಕಗಳು ಸರಿ ಇಲ್ಲ ಎನ್ನುವ ಆರೋಪದ ಹಿನ್ನೆಲೆ ಸದನ ಸಮಿತಿ ರಚಿಸುವುದಾಗಿ ಈಗಾಗಲೇ ಸಿಎಂ ಹೇಳಿದ್ದಾರೆ.
ವಿಧಾನಪರಿಷತ್ ಸದಸ್ಯರು ಕೂಡ ಸಮಿತಿಗೆ ಬೇಕಿದ್ದು ಸಮಿತಿ ಆಗುತ್ತಿದ್ದಂತೆ ಯಾವ ಯಾವ ಘಟನೆಗಳನ್ನು ಯಾವ ಏಜೆನ್ಸಿ ಘಟಕ ನಿರ್ಮಾಣ ಮಾಡಿದ್ದಾರೆ, ಯಾರು ದಾರಿ ತಪ್ಪಿಸುತ್ತಿದ್ದಾರೆ ನೋಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅದರ ಜೊತೆಯಲ್ಲಿ ಕುಡಿಯುವ ನೀರನ್ನು ಹಳ್ಳಿಗಳಿಗೆ ಕೊಡಲು ಮತ್ತು ನಿರ್ವಹಣೆ ಮಾಡಲು ಗ್ರಾಮ ಪಂಚಾಯತ್‌ಗಳಿಗೆ ಅಗತ್ಯವಿ ಸಹಕಾರ ನೀಡಲಾಗುತ್ತದೆ ಎಂದರು.
ಇದನ್ನೂ ಓದಿ:ಉಜ್ಜಯಿನಿ ಪೀಠಕ್ಕೆ ಈಶ್ವರಪ್ಪ ಭೇಟಿ: ಶ್ರೀಗಳಿಂದ ಆಶೀರ್ವಾದ