ಬೆಂಗಳೂರು :ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಎಐಸಿಸಿಯಿಂದ ಸ್ಕ್ರೀನಿಂಗ್ ಕಮಿಟಿ ರಚನೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಮೋಹನ್ ಪ್ರಕಾಶ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸದಸ್ಯರಾಗಿ ನೀರಜ್ ದಂಗಿ, ಮೊಹಮ್ಮದ್ ಜಾವೇದ್, ಸಪ್ತಗಿರಿ ಉಲಕಾ ಅವರು ಕೂಡ ಸಮಿತಿಯಲ್ಲಿ ಇದ್ದಾರೆ. ಇನ್ನು, ಸಮಿತಿಯಲ್ಲಿ ಅಧಿಕೃತ ಸದಸ್ಯರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ನೇಮಕಗೊಂಡಿದ್ದಾರೆ. ಐದು ಮಂದಿ ರಾಜ್ಯ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಗಳು ಇರುವ ಸಮಿತಿಯು ಚುನಾವಣಾ ಸಮಿತಿಯ ಶಿಫಾರಸು ಗಳನ್ನು ಸ್ಕ್ರೀನಿಂಗ್ ಮಾಡಲಿದೆ.
ಪರಮೇಶ್ವರ್ಗೆ ಮಣೆ :ಸ್ಕ್ರೀನಿಂಗ್ ಕಮಿಟಿಯಲ್ಲಿ ಪರಮೇಶ್ವರ್ ಅವರಿಗೆ ನಿರ್ಣಾಯಕ ಪಾತ್ರ ನೀಡಲಾಗಿದೆ. ಕಳೆದ ವಾರ ಇವರು ಪಕ್ಷದ ಕೆಲ ನಾಯಕರ ನಡವಳಿಕೆಯಿಂದ ಬೇಸತ್ತು ಪ್ರಣಾಳಿಕೆ ರಚನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇವರ ಮನವೊಲಿಸಿ ತಮಗೆ ಸೂಕ್ತ ಪ್ರಾಧಾನ್ಯತೆ ಸಿಗುವಂತೆ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಇದೀಗ ಅವರಿಗೆ ಮಾನ್ಯತೆ ನೀಡಿ ಸ್ಥಾನ ಕಲ್ಪಿಸಲಾಗಿದೆ.
ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಎಐಸಿಸಿಯಿಂದ ಸ್ಕ್ರೀನಿಂಗ್ ಕಮಿಟಿ ರಚನೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಶೀಘ್ರದಲ್ಲೇ ಘೋಷಣೆ ಆಗುವ ಸಾಧ್ಯತೆ ಇದೆ. ಮುಂದಿನ 15 ದಿನದ ಒಳಗೆ ಟಿಕೆಟ್ ಘೋಷಣೆ ಆಗಲಿದೆ ಎಂಬ ಮಾಹಿತಿ ಇದೆ. ಈಗಾಗಲೇ ರಾಜ್ಯ ಚುನಾವಣಾ ಸಮಿತಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆಗಳು ನಡೆದಿವೆ. ರಾಜ್ಯ ಚುನಾವಣಾ ಸಮಿತಿ ಸಭೆಯ ಬಳಿಕ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಬಳಿಕ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿ ಹೆಸರುಗಳನ್ನು ಫೈನಲ್ ಮಾಡಲಿದೆ. ಟಿಕೆಟ್ಗಾಗಿ 1230 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಸದ್ಯ ಯಾರ ಹೆಸರನ್ನು ಕೂಡ ಫೈನಲ್ ಮಾಡಿಲ್ಲ. ಆದರೆ ಹಾಲಿ ಶಾಸಕರಿಗೆ 98 ಶೇ ಟಿಕೆಟ್ ಅಂತಿಮ ಆಗಿದೆ ಎಂಬ ಮಾಹಿತಿ ಇದೆ.
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸ್ಥಾನಕ್ಕೆ ಪರಮೇಶ್ವರ್ ಅವರು ರಾಜೀನಾಮೆ ನೀಡುತ್ತಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ನಂತರ ಈ ಕುರಿತು ತುಮಕೂರಿನಲ್ಲಿ ಮಾತನಾಡಿದ್ದ ಮಾಜಿ ಡಿಸಿಎಂ ಪರಮೇಶ್ವರ್ ಅವರು, 'ರಾಜೀನಾಮೆ ಕೋಡುತ್ತೇನೆ ಎಂಬುದೆಲ್ಲಾ ಸುಳ್ಳು, ಕೆಲ ವಿಚಾರಗಳ ಬಗ್ಗೆ ಸುರ್ಜೆವಾಲಾ ಅವರೊಂದಿಗೆ ಮಾತನಾಡಿದ್ದೇನೆ. ನಾವು ಯಾವ ರೀತಿ ಚುನಾವಣೆಗೆ ಹೋಗಬೇಕು. ಚುನಾವಣೆ ನಮ್ಮ ಪಕ್ಷದ ರಣನೀತಿ ಏನು ಇರಬೇಕು. ಚುನವಣಾ ಪ್ರಣಾಳಿಕೆಗಳು ಹೇಗೆ ಇರಬೇಕು. ಜನ ಅದನ್ನೂ ಒಪ್ಪಿಕೊಳ್ಳುತ್ತಾರಾ ಎಂಬ ಇನ್ನೂ ಆನೇಕ ವಿಚಯಗಳನ್ನು ಕುರಿತು ಚರ್ಚೆ ಮಾಡಿದ್ದೇವೆ' ಎಂದು ಹೇಳಿದ್ದರು.
ಇದನ್ನೂ ಓದಿ :ಕಾಂಗ್ರೆಸ್ ಶಾಸಕರಲ್ಲಿ ಆತಂಕ ಮೂಡಿಸಿದ ಸಿದ್ದರಾಮಯ್ಯ ಮಾತು.. ಅಷ್ಟಕ್ಕೂ ಅವರು ಹೇಳಿದ್ದೇನು?