ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ವಿವಿಧ ರಾಜಕೀಯ ನಾಯಕರು ಭೇಟಿ ನೀಡಿ ಚರ್ಚಿಸಿದ್ದಾರೆ. ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಂಜೆ ಸಿಪಿಐಎಂ ಮಹಾ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಭೇಟಿಯಾಗಿ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿದ್ದ ರಣದೀಪ್ ಸಿಂಗ್ ಸುರ್ಜೆವಾಲಾ ಕಾಂಗ್ರೆಸ್ ಪಕ್ಷದ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ರಾಜ್ಯದಲ್ಲಿ ಪಕ್ಷ ಬಲವರ್ದನೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಮ್ಮ ಪಾತ್ರ ಅತ್ಯಂತ ಪ್ರಮುಖವಾದುದ್ದಾಗಿದೆ ಎಂದಿದ್ದಾರೆ.
ಗೊಂದಲಗಳು ಏರ್ಪಡುತ್ತಿವೆ: ಪಕ್ಷವನ್ನು ಅಧಿಕಾರಕ್ಕೆ ಬಂದರೆ ತಮಗೆ ಸೂಕ್ತ ಸ್ಥಾನಮಾನ ಹಾಗೂ ಗೌರವ ಒದಗಿಸುವ ಕಾರ್ಯವನ್ನು ಹೈಕಮಾಂಡ್ ಮಾಡಲಿದೆ. ಪಕ್ಷದ ಹೈಕಮಾಂಡ್ ತಮ್ಮ ನಾಯಕತ್ವವನ್ನು ಗುರುತಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅತ್ಯಂತ ಗೌರವಯುತ ಸ್ಥಾನವನ್ನು ತಮಗೆ ಕಲ್ಪಿಸಲಾಗುವುದು. ಎಲ್ಲಕ್ಕಿಂತ ಪ್ರಮುಖವಾಗಿ ರಾಷ್ಟ್ರ ರಾಜಕಾರಣದಲ್ಲಿ ನಾಯಕತ್ವದ ವಿಚಾರವಾಗಿ ಸಾಕಷ್ಟು ಗೊಂದಲಗಳು ಏರ್ಪಡುತ್ತಿವೆ. ಸಾಕಷ್ಟು ಮಂದಿ ರಾಹುಲ್ ಗಾಂಧಿ ನಾಯಕತ್ವ ಪರ ವಿರೋಧವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.