ಬೆಂಗಳೂರು:ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರ ಕಡೆಯ ದಿನಗಳನ್ನು ಎಣಿಸುತ್ತಿದೆ. ಈ ಸರ್ಕಾರವು ಸಾರ್ವಜನಿಕರ ಹಣವನ್ನು ಸಂಪೂರ್ಣ ಲೂಟಿ ಮಾಡುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದರು. ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಮತ್ತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಪೇಸಿಎಂ ಎಂಬ ಹ್ಯಾಷ್ ಟ್ಯಾಗ್ ಹಾಕಿಕೊಳ್ಳಬೇಕು. ರಾಜ್ಯದ ಬಿಜೆಪಿ ಸರ್ಕಾರವು ಸುಳ್ಳು ಭರವಸೆಗಳ ಮೂಲಕ ಜನರನ್ನು ವಂಚಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಸಮರ್ಪಕ ಉದ್ಯೋಗ ಸೃಷ್ಟಿಸಿಲ್ಲ:2019ರಲ್ಲಿ 600 ಭರವಸೆ ನೀಡಿದ್ದ ಬಿಜೆಪಿ ಸರ್ಕಾರ, ಶೇ.91ರಷ್ಟು ಬೇಡಿಕೆಗಳನ್ನು ಈಡೇರಿಸಿಲ್ಲ ಯಾಕೆ? ರೈತರಿಗೆ ನೀಡಿದ 112ರ ಪೈಕಿ 97 ಬೇಡಿಕೆಗಳನ್ನು ಈಡೇರಿಸಿಲ್ಲ ಏಕೆ? ರಾಜ್ಯದ ಮಹಿಳೆಯರಿಗೆ ನೀಡಿದ 24ರ ಪೈಕಿ 22 ಭರವಸೆ ಯಾಕೆ ಈಡೇರಿಸಿಲ್ಲ? ಯುವಕರಿಗೆ ನೀಡಿದ 18 ಭರವಸೆಗಳಲ್ಲಿ 17 ಬೇಡಿಕೆನ್ನೂ ಈಡೇರಿಸಿಲ್ಲ. ಸಮರ್ಪಕ ಉದ್ಯೋಗಗಳನ್ನು ಸೃಷ್ಟಿ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
3 ಸಾವಿರ ಕೋಟಿ ರೂ. ಶಿಕ್ಷಣಕ್ಕೆ ನೀಡಿ, ಒಂದು ರೂಪಾಯಿ ಕೂಡಾ ಖರ್ಚು ಮಾಡಿಲ್ಲ. 4,500 ಕೋಟಿ ರೂ. ಮೊತ್ತದ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದ ಪ್ರತಿಭಾ ಪುರಸ್ಕಾರ ಈಡೇರಿಸಿಲ್ಲ. ವಸತಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂಬುದೂ ಸೇರಿದಂತೆ ನಮ್ಮ ಈ 6 ಪ್ರಶ್ನೆಗೆ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರ ಈ 10 ಪ್ರಶ್ನೆಗಳಿಗೆ ಉತ್ತರಿಸಲಿ:ಬೊಮ್ಮಾಯಿ ಸರ್ಕಾರ ಕಳೆದ ಬಾರಿ ಬಜೆಟ್ನಲ್ಲಿ ನೀಡಿದ ಭರವಸೆಯನ್ನೂ ಈಡೇರಿಸಿಲ್ಲ. ಈಗ ಹೊಸ ಬಜೆಟ್ ಮಂಡಿಸಲು ಹೊರಟಿದ್ದಾರೆ. ಹೊಸದಾಗಿ ಬಜೆಟ್ ಮಂಡಿಸುತ್ತಿರುವ ಬೊಮ್ಮಾಯಿಗೆ 10 ಪ್ರಶ್ನೆ ಕೇಳುತ್ತೇವೆ. ನಮ್ಮ ಕ್ಲಿನಿಕ್ ಆರಂಭ, ಕಲ್ಯಾಣ ಕರ್ನಾಟಕಕ್ಕೆ ಘೋಷಿಸಿದ್ದ ಹಣ ಯಾಕೆ ಬಳಸಿಕೊಂಡಿಲ್ಲ? ಒಕ್ಕಲಿಗ ಅಭಿವೃದ್ಧಿ ಹಾಗೂ ಬಿಲ್ಲವ ಕೋಶಕ್ಕೆ ನೀಡಿದ್ದ ಅನುದಾನ ಬಿಡುಗಡೆ ಯಾಕೆ ಮಾಡಿಲ್ಲ? ಪಂಚಮಸಾಲಿ ಲಿಂಗಾಯಿತರಿಗೆ ನೀಡಿದ ಭರವಸೆ ಇನ್ನೂ ಈಡೇರಿಲ್ಲ? ಮೀಸಲಾತಿ ಭರವಸೆ ಈಡೇರಿಸಿಲ್ಲ. ಗೋವಾದಲ್ಲಿ ಯಾಕೆ ಕನ್ನಡ ಭವನ ನಿರ್ಮಾಣವಾಗಿಲ್ಲ? ನಾಳಿನ ಬೊಮ್ಮಾಯಿ ಅವರ ಸುಳ್ಳು ಬಜೆಟ್ನ್ನು ಈಗಾಗಲೇ ನಾಡಿನ ಜನ ತಿರಸ್ಕರಿಸಿದ್ದಾರೆ ಎಂದು ಸುರ್ಜೇವಾಲ.
ಬಸವರಾಜ ಸುಳ್ಳಿನ ಸರದಾರ:ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮಾತನಾಡಿ, ಬಸವರಾಜ ಸುಳ್ಳಿನ ಸರದಾರ. ಅವರು ನೀಡಿದ ಭರವಸೆ ಈಡೇರಿಸದಿದ್ದರೆ, ಬೆನ್ನಿಗೆ ಚೂರಿ ಹಾಕಿದಂತೆ ಆಗಲಿದೆ. ಸರ್ಕಾರ ಜನ ವಿರೋಧಿಯಾಗಿದೆ. ಬಸವರಾಜ ಬೊಮ್ಮಾಯಿ ಅವರ ಸುಳ್ಳಿನ ಬಜೆಟ್ ಮಂಡನೆಯಾಗುವ ಮುನ್ನವೇ ರಾಜ್ಯದ ಜನತೆ ತಿರಸ್ಕಾರ ಮಾಡಿದ್ದಾರೆ ವಾಗ್ದಾಳಿ ನಡೆಸಿದರು.