ಬೆಂಗಳೂರು: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ವಯಸ್ಸಿನ ಮಗುವಿಗೆ ಮೂತ್ರ ಪಿಂಡದ ಕಲ್ಲಿನ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿರುವ ಎನ್.ಯು. ಆಸ್ಪತ್ರೆಯ ತಜ್ಞ ವೈದ್ಯರು, ವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಕೇವಲ 7 ತಿಂಗಳು 15 ದಿನಗಳ ಹೆಣ್ಣು ಮಗುವಿನ ಎರಡೂ ಮೂತ್ರಪಿಂಡಗಳಲ್ಲಿ ಸೃಷ್ಟಿಯಾಗಿದ್ದ ಕಲ್ಲುಗಳನ್ನು ರಾಜಾಜಿನಗರದ ಎನ್.ಯು. ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಮಿನಿ ಪಿ.ಇ.ಆರ್.ಸಿ ಮತ್ತು ಲೇಸರ್ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಇದೀಗ ಮಗು ಆರೋಗ್ಯದಿಂದಿದ್ದು, ಚೇತರಿಸಿಕೊಂಡಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳು ಕಂಡು ಬರುವುದಿಲ್ಲ. ಏಕೆಂದರೆ ಈ ವಯಸ್ಸಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಘನ ಪದಾರ್ಥ ಸೇವಿಸುವುದಿಲ್ಲ. ಆದರೆ ಈ ಮಗುವಿಗೆ ಎರಡೂ ಮೂತ್ರಪಿಂಡಗಳಲ್ಲಿ ಕಲ್ಲಿನ ಸಮಸ್ಯೆ ಕಂಡು ಬಂದಿರುವುದು ವಿಸ್ಮಯಕ್ಕೆ ಕಾರಣವಾಗಿದೆ.
3 ವಾರಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಮಗು ವಿಪರೀತವಾಗಿ ಅಳುತ್ತಿತ್ತು. ತಜ್ಞ ವೈದ್ಯರು ತೀವ್ರ ತಪಾಸಣೆಗೆ ಒಳಪಡಿಸಿದಾಗ ಎರಡೂ ಕಿಡ್ನಿಗಳಲ್ಲಿ ಕಲ್ಲುಗಳು ಇರುವುದನ್ನು ಪತ್ತೆ ಮಾಡಿದ್ದರು. ಎಡ ಭಾಗದ ಕಿಡ್ನಿಯಿಂದ ಮೂತ್ರ ಕೋಶಕ್ಕೆ ಸಂಪರ್ಕ ಕಲ್ಪಿಸುವ ಟ್ಯೂಬ್ನಲ್ಲಿ 9 ಮಿಲಿ ಮೀಟರ್, ಒಂದು ಸೆಂಟಿ ಮೀಟರ್ ಕಲ್ಲು ಇರುವುದು ಕಂಡು ಬಂತು. ಯುರೆಕ್ಟ್ರೋಸ್ಕೋಪಿ ತಂತ್ರಜ್ಞಾನದ ಮೂಲಕ ಕಲ್ಲು ತೆಗೆಯಲಾಗಿದೆ. 2 ವಾರಗಳ ನಂತರ ಇದೀಗ ಮಗು ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ.