ಬೆಂಗಳೂರು:ಎಸ್ಎಸ್ಎಲ್ಸಿ ಪರೀಕ್ಷೆಯ ಮೂರನೇ ದಿನವಾದ ಇಂದು ಕೂಡ ಸಚಿವ ಸುರೇಶ್ ಕುಮಾರ್ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿದರು. ನಗರದ ಫ್ರೇಜರ್ ಟೌನ್ ಶಾಲೆಯಿಂದ ರೌಂಡ್ಸ್ ಆರಂಭಿಸಿದ ಸಚಿವರು ಹೆಚ್ಎಎಲ್ ಶಾಲೆಗಳಿಗೂ ಭೇಟಿ ನೀಡಿ, ಮಕ್ಕಳಿಗೆ ಶುಭ ಕೋರಿದರು.
ಇದೇ ವೇಳೆ ಶಾಲಾ ಆವರಣದಲ್ಲಿ ಪಾರಿಜಾತ ಗಿಡ ನೆಟ್ಟು, ಪರಿಸರ ಕಾಳಜಿ ಬಗ್ಗೆ ತಿಳಿ ಹೇಳಿದರು. ಇತ್ತ ಪರೀಕ್ಷೆ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸುವುದರ ಜೊತೆಗೆ ಶುಭ ಹಾರೈಸಿದರು. ಜೀವನ್ ಭೀಮಾ ನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದಾಗ ವಿದ್ಯಾರ್ಥಿನಿಯೊಬ್ಬಳು ಸಚಿವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ನಡೆಯಿತು.
ನಂತರ ಮಾತನಾಡಿದ ಸಚಿವರು, ಇವತ್ತು ಗಣಿತ ಮತ್ತು ಸಮಾಜಶಾಸ್ತ್ರ ಪರೀಕ್ಷೆ ನಡೆಯುತ್ತಿದೆ. ಗಣಿತ ಪರೀಕ್ಷೆ ಇರೋದ್ರಿಂದ ಇಡೀ ರಾಜ್ಯದಲ್ಲಿ ಇಂದು ಅತೀ ಹೆಚ್ಚು ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಬೆಂಗಳೂರಿನ ಪೂರ್ವ ಭಾಗಕ್ಕೆ ಭೇಟಿ ನೀಡಿದ್ದೇನೆ. ಇಂದು ಭೇಟಿ ನೀಡಿದ ಶಾಲೆಗಳಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಆಗಿದೆ. ಯಾವುದೇ ತೊಂದರೆ ಇಲ್ಲದೆ ಪರೀಕ್ಷೆ ನಡೆಯಲಿದೆ ಎಂದರು.
ಕಲಬುರಗಿಯಲ್ಲಿ ವಿದ್ಯಾರ್ಥಿಗಳ ಕಾಪಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಹೊರಗಿನಿಂದ ಕಾಪಿ ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲ ಬಾರಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಕಾಪಿ ಪ್ರಯತ್ನ ಮಾಡಲ್ಲ. ರಿಪೀಟರ್ಸ್ ಈ ಪ್ರಯತ್ನ ಮಾಡ್ತಾರೆ ಅಂತ ತಿಳಿಸಿದರು.
ಪಾವಗಡದಲ್ಲಿ ಸಿಬ್ಬಂದಿಗೆ ಸೋಂಕು ವಿಚಾರವಾಗಿ ಮಾತನಾಡಿದ ಸಚಿವರು, ಇಡೀ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದೆ. ಯಾವುದೇ ಮೇಲ್ವಿಚಾರಕರಿಗೆ ಕೊರೊನಾ ಬಂದಿಲ್ಲ. ಜೊತೆಗೆ ಇದರ ಬಗ್ಗೆ ವಿಚಾರಣೆ ಕೂಡ ನಡೆಯುತ್ತಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.
ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಯತ್ನ ವಿಚಾರವಾಗಿ ಮಾತನಾಡುತ್ತಾ, ನನಗೆ ಈ ವಿಚಾರ ಅಚ್ಚರಿ ತರ್ತಿದೆ. ಮುಂಬೈನಿಂದ ಬಂದ ವ್ಯಕ್ತಿ ಬಾಲಕಿಯನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದು, ಬಾಲಕಿ ಪರೀಕ್ಷೆ ಬರೆಯುತ್ತಿದ್ದಾಳೆ ಅಂತ ಹೇಳಿದರು.
ಇತ್ತ ಅದೇ ಜಿಲ್ಲೆಯಲ್ಲಿ ಸೇಂಟ್ ಮೇರಿ ಮತ್ತು ಸರ್ಕಾರಿ ಪ್ರೌಢಶಾಲೆ ಎರಡೂ ಶಾಲೆ ಸೇರಿ ರಿಪೀಟರ್ಸ್ ಕ್ಯಾಂಡಿಡೇಟ್ ಬದಲು ಬೇರೆಯವರು ಪರೀಕ್ಷೆ ಬರೆಯಲು ಬಂದಿದ್ದರು. 12 ಜನರ ಮೇಲೂ ಎಫ್ಐಆರ್ ದಾಖಲಾಗಿದೆ. ಅಪರ ಆಯುಕ್ತ ಅತುಲ್ ನಳಿನ್ ಕ್ರಮ ಕೈಗೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಅಂತ ತಿಳಿಸಿದರು.
ಮೂಡಲಪಾಳ್ಯದಲ್ಲಿ ಸೋಂಕಿತರ ಮನೆಯ ಬಳಿಯೇ ಪರೀಕ್ಷಾ ಕೇಂದ್ರ:
ಆ ಮನೆ ಶಾಲೆಯಿಂದ ಎರಡು ರಸ್ತೆ ದೂರದಲ್ಲಿದೆ. ಶಾಲೆಯ ಅಕ್ಕಪಕ್ಕ ಇಲ್ಲ, ಮೂಡಲಪಾಳ್ಯ, ಕಂಟೇನ್ಮೆಂಟ್ ಝೋನ್ ಎಂದು ಘೋಷಣೆಯಾಗಿಲ್ಲ, ಹೀಗಾಗಿ ಪರೀಕ್ಷೆ ಮುಂದುವರೆಯಲಿದೆ. ಇತ್ತ ಧರ್ಮರಾಯ ದೇವಸ್ಥಾನದ ಬಳಿಯ ಶಾಲೆ ನಿಷೇಧಿತ ಪ್ರದೇಶ ಅಲ್ಲ, ಅಲ್ಲಿ ಪರೀಕ್ಷೆಗೆ ಬಿಬಿಎಂಪಿ ಅವಕಾಶ ನೀಡಿದೆ ಎಂದು ತಿಳಿಸಿದರು.