ಬೆಂಗಳೂರು: ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಗದೇರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಭೇಟಿ ನೀಡಿ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಶಾಲೆಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿರುವ ಸಚಿವ ಸುರೇಶ್ ಕುಮಾರ್ ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುವ ಈ ಸರ್ಕಾರಿ ಶಾಲೆಯಲ್ಲಿ ದಾಖಲಾತಿಗಾಗಿ ಹಲವು ಕಡೆಗಳಿಂದ ಬೇಡಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ, ಶಾಲಾ ದಾಖಲಾತಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಮಕ್ಕಳು ಮತ್ತು ಪೋಷಕರನ್ನು ಮಾತನಾಡಿಸಿದರು. ಇದೇ ವೇಳೆ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಶಿಕ್ಷಕರೊಂದಿಗೆ ಚರ್ಚೆ ಕೂಡ ನಡೆಸಿದರು.
ಪುಟಾಣಿ ಮಕ್ಕಳೊಂದಿಗೆ ಸಚಿವರ ಮಾತು ನಂತರ ಈ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಂತಹ ಮಹಾನಗರದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿರುವುದು ಸರ್ಕಾರಿ ಶಾಲೆಗಳ ಮೇಲೆ ಸಾರ್ವಜನಿಕರು ಭರವಸೆ ಹೊಂದಿರುವುದರ ದ್ಯೋತಕವಾಗಿದೆ. ಮೊದಲೆಲ್ಲಾ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೊಂದಲು ಪ್ರಭಾವ ತರುವುದನ್ನು ಕಾಣುತ್ತಿದ್ದೆವು. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿರುವುದರಿಂದ ಈಗ ಇಂತಹ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆಯಲು ಹಲವು ಶಾಸಕರು ಮತ್ತು ಸಚಿವರ ಮೂಲಕ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಕರು, ಸಿಬ್ಬಂದಿ ಜೊತೆ ಸಚಿವ ಸುರೇಶ್ ಕುಮಾರ್ ರಾಜ್ಯದೆಲ್ಲೆಡೆ ದಾಖಲಾತಿ ಪ್ರಕ್ರಿಯೆ ಮುಂದುವರೆದಿದ್ದು, ಚಂದನ ದೂರದರ್ಶನ ವಾಹಿನಿಯಲ್ಲಿ ಸಂವೇದಾ ಪಾಠಗಳು ಆರಂಭವಾಗಿವೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿರುವುದು ಕಂಡು ಬರುತ್ತಿದೆ ಎಂದು ಇಂದಿನ ಸರ್ಕಾರಿ ಶಾಲೆಗಳ ಸಾಧನೆಯನ್ನು ಬಣ್ಣಿಸಿದರು.
ವಿದ್ಯಾರ್ಥಿಗಳೊಂದಿಗೆ ಸಚಿವ ಸುರೇಶ್ ಕುಮಾರ್