ಬೆಂಗಳೂರು: ರಾಜ್ಯದಲ್ಲಿ 2021ರ ಫೆಬ್ರವರಿಯಲ್ಲಿ ನಡೆದಿರುವ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನ ಕುರಿತು ಯಾವುದೇ ಮಾಹಿತಿ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿಲ್ಲ. ಮೌಲ್ಯಮಾಪನದ ಪ್ರಕ್ರಿಯೆ ಈವರೆಗೂ ಪ್ರಾರಂಭವಾಗಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಯಾವುದೇ ಸುಳಿವು ಸಹ ಸಿಕ್ಕಿಲ್ಲ. ಈ ಬಗ್ಗೆ ಅಭ್ಯರ್ಥಿಗಳ ಪರ ನಿಲ್ಲಲು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ಧರಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಈ ಹಿಂದೆ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರು, ಕಾರ್ಯದರ್ಶಿಗಳ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದಿದ್ದೆ. ಯುವ ಜನತೆ ಭರವಸೆ ಕಳೆದುಕೊಳ್ಳುವ ಮುನ್ನ ಮೌಲ್ಯಮಾಪನ ಕುರಿತು ಮಾಹಿತಿ ನೀಡಿ ಎಂದು ಕೇಳಿದ್ದೆ. ಆದರೆ, ಈವರೆಗೂ ಈ ಕುರಿತು ಯಾವುದೇ ಮಾಹಿತಿ ನನಗಾಗಲೀ ಅಥವಾ ಅಭ್ಯರ್ಥಿಗಳಿಗಾಗಲೀ ಲಭ್ಯವಾಗಿಲ್ಲ.