ಬೆಂಗಳೂರು :ರಾಜ್ಯ ಗ್ರಂಥಾಲಯ ಇಲಾಖೆಯಿಂದ ವಾರ್ಷಿಕ ಸಗಟು ಖರೀದಿ ಯೋಜನೆಯಡಿ ಇನ್ನು ಮುಂದೆ ಕನ್ನಡ ಪುಸ್ತಕಗಳ 500 ಪ್ರತಿಗಳನ್ನು ಖರೀದಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಹೇಳಿದ್ದಾರೆ.
ರಾಜ್ಯ ಸಾರ್ವಜನಿಕ ಗ್ರಂಥಾಲಯ ನಿರ್ದೇಶನಾಲಯದಲ್ಲಿ ನೂತನ ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ಪ್ರಥಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬರಹಗಾರರ ಮತ್ತು ಪ್ರಕಾಶಕರ ಸಂಘದ ಕೋರಿಕೆಯಂತೆ ಬಹುದಿನಗಳ ನಿರೀಕ್ಷೆಯಾಗಿದ್ದ ಕನ್ನಡದ 300 ಪ್ರತಿಗಳ ಖರೀದಿಯನ್ನು 500 ಪ್ರತಿಗಳಿಗೆ ಹೆಚ್ಚಿಸಲು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ, ಗ್ರಂಥಗಳ ಮಹತ್ವದ ಕುರಿತು ತಿಳುವಳಿಕೆ ಮೂಡಿಸಿ ಅಧ್ಯಯನದ ಅಭಿರುಚಿ ಬೆಳೆಸಲು ಕ್ರಮ ಕೈಗೊಳ್ಳುವ ಕುರಿತು ಇಲಾಖೆ ಚಿಂತನೆ ನಡೆಸಿದೆ. ಈ ಕುರಿತಂತೆ ನಮ್ಮ ಪುಸ್ತಕ ಸಮಿತಿ ರೂಪುರೇಷೆ ಸಿದ್ದಪಡಿಸಬೇಕೆಂದು ಮನವಿ ಮಾಡಿದರು. ನಮ್ಮ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಪುಸ್ತಕಗಳನ್ನು ಓದದೇ ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದ ಓದುವಂತೆ ಅವರನ್ನು ಅಧ್ಯಯನ ಯೋಗ್ಯರನ್ನಾಗಿಸಬೇಕಾದ ಅಗತ್ಯವಿದೆ ಎಂದರು.