ಬೆಂಗಳೂರು : ನಗರದಲ್ಲಿ ಇಂದು ಬೆಳಗ್ಗೆ 8.00 ಗಂಟೆಯಿಂದ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಕೆಎಎಸ್ ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸ ಬೇಕೆಂದು ಆಗ್ರಹಿಸಿ ಕೆಪಿಎಸ್ಸಿ ಎದುರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಬೆನ್ನಲ್ಲೇ ಕೆಪಿಎಸ್ಸಿ ಕಾರ್ಯದರ್ಶಿ ಶ್ರೀ ಜನ್ನು, ಲಿಖಿತ ಪ್ರಕಟಣೆ ಮೂಲಕ "2015 ರ ಗೆಜೆಟೆಡ್ ಪ್ರೊಬೇಷನರ್ ಬ್ಯಾಚ್ ಅಭ್ಯರ್ಥಿಗಳಿಗೆ ಜುಲೈ 29 ರಿಂದ ಸಂದರ್ಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಶಾಸಕ ಸುರೇಶ್ ಕುಮಾರ್ ರಿಂದ ಕೆ ಪಿ ಎಸ್ ಸಿ ಎದುರು ಉಪವಾಸ ಸತ್ಯಾಗ್ರಹ ಹೋರಾಟದ ಹಿನ್ನೆಲೆ:
2015 ರ ಬ್ಯಾಚ್ನ ಕೆಎಎಸ್ ಅಧಿಕಾರಿಗಳ ಆಯ್ಕೆಗಾಗಿ ಅಧಿಸೂಚನೆ 12-05-2017 ರಂದು ಹೊರಬಿದ್ದಿದ್ದು , ಅದರ ಪೂರ್ವಭಾವಿ ಪರೀಕ್ಷೆ( preliminary exam) ನಡೆದದ್ದು 20-08-2017 ರಂದು. ಮುಖ್ಯ ಪರೀಕ್ಷೆ ನಡೆದದ್ದು 2017 ರ ಡಿಸೆಂಬರ್ 16 ರಿಂದ 23 ರವರೆಗೆ. ಆದರೆ ಒಂದು ವರ್ಷ ಕಳೆದರೂ ಫಲಿತಾಂಶ ಮಾತ್ರ ದೊರಕಿರಲಿಲ್ಲ.ನಾನು ಈ ಕುರಿತು ಕೆಪಿಎಸ್ಸಿ ಅಧ್ಯಕ್ಷರು, ಕಾರ್ಯದರ್ಶಿ, ಎಲ್ಲರೊಡನೆ ಚರ್ಚಿಸಿ ಫಲಿತಾಂಶ ಬೇಗ ನೀಡಬೇಕೆಂದು ಆಗ್ರಹಿಸಿದ್ದೆ.
23-11-2018 ರಂದು ರಾಜ್ಯದ ಸಿಎಂಗೆ ಈ ಕುರಿತು ಪತ್ರ ಬರೆದಿದ್ದೆ. ದಿ.04-12-2018 ರಂದು ಕೆ.ಎ.ಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟಿಸ ಬೇಕೆಂದು ಕೆಪಿಎಸ್ಸಿ ಕದ ತಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ.
ಕೊನೆಗೂ ಒಂದು ವರ್ಷ ಒಂದು ತಿಂಗಳ ನಂತರ ಅಂದರೆ 28-01-2019 ರಂದು ಕೆಎಎಸ್ 2015 ನೇ ಬ್ಯಾಚ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಯಿತು. ತದನಂತರ ಸಂದರ್ಶನದ ದಿನಾಂಕಕ್ಕಾಗಿ ಅಭ್ಯರ್ಥಿಗಳು ಕಾಯತೊಡಗಿದರು. ಆದರೆ ಅನೇಕ ಪ್ರಯತ್ನಗಳ ಮತ್ತು ಹೋರಾಟದ ನಂತರವೂ ಸಂದರ್ಶನದ ದಿನಾಂಕವನ್ನು ಪ್ರಕಟಿಸಲಿಲ್ಲ. ಈಗ ಎಲ್ಲಾ ಅಭ್ಯರ್ಥಿಗಳಿಗೆ ಇಂದು ಸಂದರ್ಶನ ದಿನಾಂಕದ ಭರವಸೆ ದೊರಕಿರುವುದಕ್ಕೆ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ ಎಂದರು.