ಬೆಂಗಳೂರು:ಕರ್ನಾಟಕಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿಳಂಬ ಪ್ರವೃತ್ತಿಯನ್ನು ಖಂಡಿಸಿ ಆಯೋಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಮುಖಂಡನನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದು ಅತ್ಯಂತ ನಿರ್ದಯಿ ಕ್ರಮ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಯೋಗದ ಕಾರ್ಯ ವೈಖರಿಯಿಂದ ಸಹಸ್ರಾರು ಉದ್ಯೋಗಾಕಾಂಕ್ಷಿ ಯುವಕ-ಯುವತಿಯರು ಬೇಸತ್ತಿದ್ದಾರೆ. ಆಯೋಗದ ಒಟ್ಟು ನಡವಳಿಕೆಯಿಂದ ತಮಗೆ ಭವಿಷ್ಯವೇ ಇಲ್ಲವೇನೋ ಎಂಬ ಹತಾಶ ಭಾವನೆ ತಲುಪುತ್ತಿದ್ದಾರೆ. ಇದೀಗ ಆಯೋಗದ ಮತ್ತೋರ್ವ ಕಾರ್ಯದರ್ಶಿ ಮತ್ತು ಆಯೋಗದ ಸದಸ್ಯರ ನಡುವೆ ಯಥಾ ಪ್ರಕಾರ ಸಂಘರ್ಷ ಪ್ರಾರಂಭವಾಗಿದೆ. ಈ ಕುರಿತು ನಾನು ನಿರಂತರವಾಗಿ ಸರ್ಕಾರಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇನೆ. ಇವರಿಬ್ಬರ ನಡುವಿನ ಜಗಳದಲ್ಲಿ ಉದ್ಯೋಗಾಕಾಂಕ್ಷಿಗಳು ಬಡವಾಗುತ್ತಿದ್ದಾರೆ.
ಯಾರಿಗೂ ತೊಂದರೆ ಕೊಡದೆ ಏಕಾಂಗಿಯಾಗಿ ಉದ್ಯೋಗಾಕಾಂಕ್ಷಿಗಳ ಪರ ಪ್ರತಿಭಟನೆ ನಡೆಸುತ್ತಿದ್ದಾಗ ವಿದ್ಯಾರ್ಥಿ ಮುಖಂಡನನ್ನು ಧರಧರನೆ ಎಳೆದುಕೊಂಡು ಹೋದ ದೃಶ್ಯ ಅತ್ಯಂತ ಅಸಮರ್ಥನೀಯ. ಅದರಲ್ಲೂ ಅವರ ವಿರುದ್ಧ ಜಾಮೀನುರಹಿತ ಸೆಕ್ಷನ್ಗಳಡಿ ಎಫ್.ಐ.ಆರ್ ದಾಖಲಿಸಿರುವ ಪೊಲೀಸರ ಕ್ರಮ ಖಂಡನೀಯ.