ಬೆಂಗಳೂರು: ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೋರಿ ಸಿಎಂ ಯಡಿಯೂರಪ್ಪಗೆ ಪತ್ರದ ಮುಖೇನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಸಿಎಂಗೆ ಸುರೇಶ್ ಕುಮಾರ್ ಪತ್ರ ಕೋವಿಡ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ ಶಿಕ್ಷಣ ಕ್ಷೇತ್ರವು ಪ್ರಧಾನವಾಗಿದೆ. ಸರ್ಕಾರ ವಿಧಿಸಿದ ಲಾಕ್ಡೌನ್ ರಾಜ್ಯಾದ್ಯಂತ ಇರುವ ಸಾವಿರಾರು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆ ಅವಲಂಬಿಸಿದ್ದ ಹಲವು ವರ್ಗಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದ ಕಾರಣ ಪೋಷಕರು ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ನಿರೀಕ್ಷಿತ ರೀತಿಯಲ್ಲಿ ಆಸಕ್ತಿ ತೋರಲಿಲ್ಲ. ಇದೂ ಕೂಡ ಬಹು ವಿಧದ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಯಿತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕಾಯಕದಲ್ಲಿ ಸಾವಿರಾರು ವಿದ್ಯಾಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿವೆ. ಈ ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ಲಕ್ಷಾಂತರ (ಅಂದಾಜು ಎರಡು ಲಕ್ಷ) ಬೋಧಕ - ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾ ಸಂಸ್ಥೆಗಳ ಆಡಳಿತ ವರ್ಗಗಳು ನೀಡುವ ವೇತನ - ಭತ್ಯೆಗಳನ್ನು ಸಂತೃಪ್ತಿಯಿಂದ ಸ್ವೀಕರಿಸಿ ಮಕ್ಕಳ ಭವಿಷ್ಯವನ್ನ ಕಾಯುತ್ತಿದ್ದಾರೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅನುದಾನರಹಿತ ಶಾಲೆಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕ - ಶಿಕ್ಷಕೇತರ ಸಿಬ್ಬಂದಿಗೆ ತಾವು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಈ ಸಮುದಾಯಕ್ಕೆ ವಿಶ್ವಾಸ ತುಂಬಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.
ಓದಿ:ಕೋವಿಡ್ನಿಂದ ಅನಾಥವಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ; ಪ್ರಧಾನಿಗೆ ಸೋನಿಯಾ ಪತ್ರ